

ಗಂಗೊಳ್ಳಿ: ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆ ಮೂಲಕ ಅಭಿವೃದ್ಧಿಗೊಳಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಲೋಕಸೇವೆ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂಥ ಅನುಭವ ನೀಡುವುದು ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆ ಬೆಳೆಸುವುದು ಎನ್ನೆಸ್ಸೆಸ್‌ನ ಪ್ರಮುಖ ಉದ್ದೇಶ ಎಂದು ಗುಜ್ಜಾಡಿಯ ಉದ್ಯಮಿ ಉಮೇಶ ಎಲ್.ಮೇಸ್ತ ಹೇಳಿದರು.
ಗುಜ್ಜಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎನ್ನೆಸ್ಸೆಸ್‌ನಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಮತ್ತು ರಾಷ್ಟ್ರೀಯ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ ಬೆಳೆಯುತ್ತದೆ ಅಲ್ಲದೆ ಆತ್ಮ ವಿಶ್ವಾಸ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ.ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಸುಭಾಶ್ಚಂದ್ರ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಿ.ವೆಂಕಟೇಶ ಶೆಣೈ, ಜಿ.ಎಸ್.ವಿ.ಎಸ್.ಅಸೋಸಿಯೇಷನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಕಾಲೇಜಿನ ಕಾರ್ಯದರ್ಶಿ ಎನ್.ಸದಾಶಿವ ನಾಯಕ್, ಶಾಲೆ ಮುಖ್ಯಶಿಕ್ಷಕ ಗಂಗಾಧರ ಬಂಟ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಮನಾಥ ಚಿತ್ತಾಲ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಗಾಯತ್ರಿ ಕೊಡಂಚ, ಎಸ್.ವಿ.ಶಾಲೆಗಳ ಹಳೇ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಭಾಸ್ಕರ ಎಚ್.ಜಿ.ಮತ್ತು ಎನ್ನೆಸ್ಸೆಸ್ ವಿದ್ಯಾರ್ಥಿ ಪ್ರತಿನಿಧಿ ಕೆ.ಪ್ರೀತಮ್ ನಾಯಕ್ ಉಪಸ್ಥಿತರಿದ್ದರು. ಭಾರತಿ ಸ್ವಾಗತಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುಗುಣ ಆರ್.ಕೆ. ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಪ್ರಫುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.