

ರಾಮನಗರ: ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಕನ್ನಡ ಜ್ಯೋತಿ ರಥಕ್ಕೆ ನಗರದಲ್ಲಿ ಬುಧವಾರ ಅದ್ದೂರಿ ಸ್ವಾಗತ ದೊರೆಯಿತು. ಜಿಲ್ಲಾಡಳಿತ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಕನ್ನಡಾಭಿಮಾನಿಗಳು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಅದ್ದೂರಿ ಮೆರವಣಿಗೆ ಮುಖೇನ ರಥಯಾತ್ರೆಗೆ ಮೆರಗು ಹೆಚ್ಚಿಸಿದರು.
ಮಾಗಡಿಯಿಂದ ಬಂದ ರಥಕ್ಕೆ ಗಡಿಯಂಚಿನ ಲಕ್ಷ್ಮೀಪುರದಲ್ಲಿ ರಾಮನಗರ ತಾಲೂಕು ತಹಸೀಲ್ದಾರ್ ತೇಜಸ್ವಿನಿ, ತಾಪಂ ಇಒ ಪ್ರದೀಪ್ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ವಾಗತಿಸಿಕೊಂಡರು. ನಂತರ ರಥ ರಾಮನಗರದ ರಾಯರದೊಡ್ಡಿಯ ಭುವನೆಶ್ವರಿ ದೇವಾಲಯಕ್ಕೆ ಆಗಮಿಸಿತು.
ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭುವನೆಶ್ವರಿ ದೇವಿಗೆ ಬೃಹತ್ ಗಾತ್ರ ಹೂವು ಮಾಲೆ ಹಾಕಿ, ರಥಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾಧಿಕಾರಿ ಯಶ್ವಂತ್ ಗುರ್‌ಕರ್, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಉಪ ವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ತೇಜಸ್ವಿನಿ, ತಾಪಂ ಇಒ ಪ್ರದೀಪ್ ಪುಷ್ಪಾರ್ಚನೆ ಮಾಡಿದರು.
ಪೂರ್ಣಕುಂಭ ಕಳಸಗಳೊಂದಿಗೆ ರಥವನ್ನು ಮೆರವಣಿಗೆ ಮುಖಾಂತರ ರಾಯರದೊಡ್ಡಿ ಸರ್ಕಲ್‌ನಿಂದ ಜನಪದ ಕಲಾತಂಡಗಳೊಂದಿಗೆ, ಕೈಯಲ್ಲಿ ನಾಡಧ್ವಜ ಹಿಡಿದು, ಶಾಲಾ ಮಕ್ಕಳು, ಕನ್ನಡಪರ ಸಂಘಟನೆಯವರು ಅಧಿಕಾರಿಗಳು ಹೆಜ್ಜೆ ಹಾಕಿದರು.
ಕೆಂಪೇಗೌಡ ಸರ್ಕಲ್, ಐಜೂರು ಸರ್ಕಲ್, ತಾಲೂಕು ಆಡಳಿತ ಸೌಧ, ಎಪಿಎಂಸಿ ಮಾರುಕಟ್ಟೆ ವೃತ್ತ ಮತ್ತೆ ವಾಪಸ್ ಐಜೂರು ವೃತ್ತಕ್ಕೆ ಬಂದು ಹಳೇ ಬಸ್ ನಿಲ್ದಾಣದ ಕೆಂಗಲ್ ಹನುಮಂತಯ್ಯ ವೃತ್ತ ಬಳಸಿ ಬಿ.ಎಂ.ರಸ್ತೆ ಮುಖಾಂತರ ರೋಟರಿ ಸರ್ಕಲ್, ಪಿ.ಡಬ್ಲ್ಯೂ.ಡಿ. ಸರ್ಕಲ್ ಮೂಲಕ ವಿಜಯನಗರದ ಆಂಜನೇಯ ಆರ್ಚ್‌ವರೆಗೆ ಮೆರವಣಿಗೆ ಸಾಗಿ ನಂತರ ಬಿಡದಿ ಕಡೆ ರಥ ಸಾಗಿತು.
ದಾರಿಯುದ್ದಕ್ಕೂ ಅದ್ದೂರಿ ಸ್ವಾಗತ
ರಾಮನಗರಕ್ಕೆ ಆಗಮಿಸಿದ ರಥಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತರ ಮೂಲಕ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಶಾಲಾ ಕಾಲೇಜು ಮಕ್ಕಳು ಮೆರವಣಿಗೆಗೆ ಮತ್ತಷ್ಟು ಮೆರಗು ತಂದರು. ಕನ್ನಡಪರ ಸಂಘಟನೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಕತ್ತಿನಲ್ಲಿ ಕನ್ನಡ ಶಾಲು, ಕೈಯಲ್ಲಿ ಧ್ವಜ ಹಿಡಿದು ಇಡೀ ಮೆರವಣಿಗೆ ಕನ್ನಡ ಬಾವುಟದಲ್ಲಿ ಮಿಂದೆದ್ದಿತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಕೈಯಲ್ಲಿ ಹೂವು ಹಿಡಿದು ರಥಕ್ಕೆ ಎರೆಚುವ ಮೂಲಕ ರಾಮನಗರದಲ್ಲಿ ರಥ ಸಂಚಾರಕ್ಕೆ ಮತ್ತಷ್ಟು ಹುರುಪು ಹೆಚ್ಚಿಸಿದರು.
ಕಲಾತಂಡಗಳ ಮೆರಗು
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ಕೇರಳ ಚಂಡೆ, ಪೂಜಾ ಕುಣಿತ, ಪಟ ಕುಣಿತ, ಸೋಮನ ಕುಣಿತ ಕಲಾ ತಂಡಗಳ ಮೆರವಣಿಗೆ ರಥ ಮೆರವಣಿಗೆಯ ಅದ್ದೂರಿ ಸ್ವಾಗತಕ್ಕೆ ವೈಭವ ಹೆಚ್ಚಿಸಿತ್ತು.
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ತಾಲೂಕು ಅಧ್ಯಕ್ಷ ಬಿ.ಟಿ.ನಾಗೇಶ್, ಕನ್ನಡಪರ ಸಂಘಟನೆ ಮುಖಂಡರಾದ ಜಯಕರ್ನಾಟಕ ರವಿ, ಶಿವುಗೌಡ, ಐಜೂರು ಜಗದೀಶ್, ಮಾದೇಗೌಡ, ರಾಜು, ಕಿರಣ್, ಸಾಹಿತಿ ಭೈರೇಗೌಡ, ಅರುಣ್‌ಕುಮಾರ್, ಶ್ರೀಧರ್, ಜಯಕುಮಾರ್, ಬಸವರಾಜು, ಪ್ರತಾಪ್, ಮನು, ರಾಜೇಶ್, ಸಿದ್ದರಾಮೇಗೌಡ, ಕೆ.ಚಂದ್ರಯ್ಯ, ಮಹಿಳಾ ಆಭಿವೃದ್ಧಿ ಇಲಾಖೆ ಕಾಂತರಾಜು ಇದ್ದರು.