ಕನ್ನಡ ರಾಜ್ಯೋತ್ಸವ, ಪುನೀತ್ ಸ್ಮರಣೆ

01hgr02
Published on

ಹಲಗೂರು: ಕನ್ನಡಾಭಿಮಾನಿಗಳು ಹಾಗೂ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಬುಧವಾರ ಕನ್ನಡ ರಾಜ್ಯೋತ್ಸವ ಹಾಗೂ ನಟ ಪುನೀತ್ ರಾಜಕುಮಾರ್ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಚನ್ನಪಟ್ಟಣ ರಸ್ತೆಯಲ್ಲಿರುವ ಗಿರೀಶ್ ಫಾಸ್ಟ್‌ಫುಡ್ ಮಾಲೀಕ ಗಿರೀಶ್ ಅವರ ಪತ್ನಿ ಮಾಲಾ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.


ನಂತರ ಪುನೀತ್ ರಾಜಕುಮಾರ್ ಅವರ ಎರಡನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾಲಾ ಅವರು 70 ಬಡ ಮಹಿಳೆಯರಿಗೆ ಸೀರೆ ವಿತರಿಸಿದರು. ಬೆಳಗ್ಗೆ ಉಪಾಹಾರ ನೀಡಲಾಯಿತು.


ಗಿರೀಶ್ ಮಾತನಾಡಿ, ಪುನೀತ್ ರಾಜಕುಮಾರ್ ಬಡಬಗ್ಗರಿಗೆ ಸಹಾಯ ಮಾಡುತ್ತಿದ್ದರು, ಅವರು ನಡೆದ ದಾರಿಯಲ್ಲೇ ಅಭಿಮಾನಿಗಳಾದ ನಾವೂ ನಡೆಯಬೇಕು, ನಾನು ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಮಾರ್ಗದರ್ಶನವನ್ನು ಪಾಲಿಸಿಕೊಂಡು ಬರುತ್ತಿದ್ದೇನೆ ಎಂದರು.


ಗವಿಮಠದ ಶ್ರೀಷಡಕ್ಷರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಗ್ರಾಮಸ್ಥರಾದ ಮಹದೇವಮ್ಮ, ಪೃಥ್ವಿ, ಬೆಳ್ಳಿ, ಮಹದೇವ, ಜೀವನ್‌ಕುಮಾರ್, ನಾಗೇಂದ್ರ, ಮಹೇಂದ್ರ, ಪ್ರವೀಣ್, ಗುರುಸಿದ್ದು, ಎನ್.ಕೆ. ಕುಮಾರ್, ಅಭಿ, ಯೋಗೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net