

ಬೆಂಗಳೂರು: ಯುವಜನರಲ್ಲಿ ಓದುವ ಆಸಕ್ತಿ ಬೆಳೆಸಲು ಅವರ ಮೊಬೈಲ್‌ಗೇ ಪುಸ್ತಕದ ಸಂದೇಶ ತಲುಪಿಸುವ ಕಾರ್ಯವಾಗಬೇಕು ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರವು ನಗರದ ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿ.ಕೆ. ವೆಂಕಟರಾಮಯ್ಯ, ಗೌರೀಶ ಕಾಯ್ಕಿಣಿ, ಅ.ನ. ಕೃಷ್ಣರಾಯ, ಕೋ. ಚೆನ್ನಬಸಪ್ಪ ಹಾಗೂ ಸಿದ್ಧಲಿಂಗಯ್ಯ ಅವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಹಳಗನ್ನಡ, ನಡುಗನ್ನಡ, ವಚನ, ದಾಸರ ಹಾಡುಗಳು, ಶಬ್ದಮಣಿ ದರ್ಪಣಗಳನ್ನು ಕಷ್ಟವೆಂದು ಅವುಗಳು ಬೇಡ ಎನ್ನುವ ಆಲೋಚನೆಯಲ್ಲಿ ಯುವನಜತೆ ಸಿಲುಕಿದ್ದಾರೆ. ಆದರೆ, ಸ್ವಲ್ಪ ಕಷ್ಟಪಟ್ಟು ಓದಿದರೆ ಅವು ಬಹಳ ಇಷ್ಟದ ವಿಷಯಗಳಾಗುತ್ತವೆ ಎಂದು ಕಿವಿಮಾತು ಹೇಳಿದರು.
ಸಾಹಿತ್ಯ ಸಂಪುಟಗಳ ಕುರಿತು ಲೇಖಕಿ ಸಾವಿತ್ರಿ ಮುಜಮದಾರ ಮಾತನಾಡಿ, ಯುವ ಲೇಖಕರಿಗೆ ಹಿಂದಿನ ಸಾಹಿತ್ಯದ ವಿಷಯ ಜ್ಞಾನ ಇಲ್ಲ. ಇದರ ಹಳಗನ್ನಡದ ಜತೆಗೆ ನಡುಗನ್ನಡ, ನವೋದಯ, ನವ್ಯ, ದಲಿತ, ಬಂಡಾಯ ಸಾಹಿತ್ಯ, ಆಧುನಿಕ ಸಾಹಿತ್ಯದ ಪರಿಚಯ ಮಾಡಿಕೊಡಬೇಕು. ಅಕಾಡೆಮಿ ಮತ್ತು ಪ್ರಾಧಿಕಾರಗಳು ಪ್ರಕಟಿಸುತ್ತಿರುವ ಪುಸ್ತಕಗಳು ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಆಕರ ಗ್ರಂಥಗಳಾಗುತ್ತವೆ. ಆದ್ದರಿಂದ ವಿವಿಗಳಿಗೆ ಪುಸ್ತಕಗಳನ್ನು ತಲುಪಿಸುವ ಕೆಲಸವಾಗಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಇಂದು ಬರೆಯುವವರು, ಓದುವವರಿಗಿಂತ ಕೇಳುವವರು ಹೆಚ್ಚಿದ್ದಾರೆ. ಅದು ಭಾವಗೀತೆಗಳಿಗೆ ಇರುವ ಶಕ್ತಿ. ಅದೇ ರೀತಿ ಯುವ ಓದುಗರನ್ನು ಕನ್ನಡದತ್ತ ಸೆಳೆಯಲು ಈಗಾಗಲೆ ಅಂಗಳದಲ್ಲಿ ತಿಂಗಳ ಪುಸ್ತಕ ಹಾಗೂ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೆ ತರಲಾಗಿದೆ. ಮುದ್ರಣದ ಜೊತೆಗೆ ಮೊಬೈಲ್ನಲ್ಲಿ ಓದುವಂತೆ ಮಾಡಬೇಕು. ಅದಕ್ಕಾಗಿ ಪಿಡಿಎಫ್ ಟೆಕ್ಟ್ಟ್ ಮಾದರಿಯ ತಂತ್ರಜ್ಞಾನ ಒದಗಿಸುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಸಾಹಿತಿಗಳ 25 ಸಂಪುಟಗಳನ್ನು ತರುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಸಂಪುಟಗಳ ಸಂಪಾದಕರಾದ ಶಾ.ಮಂ. ಕೃಷ್ಣರಾಯ, ಲಕ್ಷ್ಮಣ ಕೊಡಸೆ, ಡಾ. ಸಿದ್ಧಲಿಂಗಯ್ಯ ಅವರ ಪತ್ನಿ ರಮಾಕುಮಾರಿ ಇತರರು ಇದ್ದರು.
ಬಿಡುಗಡೆಯಾದ ಸಂಪುಟಗಳು
ಸಿ.ಕೆ. ವೆಂಕಟಸ್ವಾಮಯ್ಯ ರಚನೆಯ ‘ಆಳಿದ ಮಹಾಸ್ವಾಮಿಯವರು’; ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಚಯ- 4 (ಕಂಪಿನ ಕರೆ), ಸಂಪುಟ- 5 (ಪ್ರತಿಭೆ); ಕೋ. ಚೆನ್ನಬಸಪ್ಪ ಸಮಗ್ರ ಸಾಹಿತ್ಯ ಸಂಪುಟ-7 (ವಿಚಾರ ಸಾಹಿತ್ಯ-1) ಕುವೆಂಪು ದರ್ಶನ), ಸಂಪುಟ-8 (ವಿಚಾರ ಸಾಹಿತ್ಯ-2 ವಿವೇಕಾನಂದ ದರ್ಶನ); ಅ.ನ. ಕೃಷ್ಣರಾಯರ ಸಾಹಿತ್ಯ ಶ್ರೇಣಿ (ಸಂಪುಟ-14 ಮತ್ತು 15 ಸಾಮಾಜಿಕ ಕಾದಂಬರಿಗಳು); ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-1 (ಕಾವ್ಯ- ನಾಟಕ- ಸಂದರ್ಶನಗಳು), ಸಂಪುಟ-2 (ಊರು ಕೇರಿ-1, 2 ಮತ್ತು 3), ಸಂಪುಟ-3 (ಸಾಹಿತ್ಯ-ಸಂಸ್ಕೃತಿ-ಸಮಾಜ), ಸಂಪುಟ-4 (ಗ್ರಾಮ ದೇವತೆಗಳು-ಅವತಾರಗಳು), ಸಂಪುಟ-5 (ಸದನ ಭಾಷಣಗಳು).
ಕೋಟ್:
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕೃತಿಗಳು ಮರುಮುದ್ರಣ ಆಗಬೇಕು. ಪಿಡಿಎ್, ಮೊಬೈಲ್ನಲ್ಲಿ ಓದುವ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಮುದ್ರಣವನ್ನು ನಿರ್ಲಕ್ಷ್ಯ ಮಾಡಬಾರದು.
-ಶಾ.ಮಂ. ಕೃಷ್ಣರಾಯ, ಅನಕೃ ಸಂಪುಟ ಸಂಪಾದಕ
ಕೋಟ್:
ಕೋ. ಚೆನ್ನಬಸಪ್ಪ ಅವರ 12 ಸಂಪುಟಗಳನ್ನು ಮಾಡಲು ಒಪ್ಪಂದ ಆಗಿದೆ. ಆದರೆ ಕಳೆದ 20 ವರ್ಷದಲ್ಲಿ ಎಂಟು ಸಂಪುಟಗಳು ಮಾತ್ರ ಆಗಿವೆ. ಉಳಿದ 4 ಬೇಗ ಮುಗಿಸುವ ಕೆಲಸ ಮಾಡಬೇಕು. ಪ್ರಾಧಿಕಾರ ಈ ಕೃತಿಗಳನ್ನು ಕೇವಲ 500 ಪ್ರತಿ ಮುದ್ರಣ ಮಾಡುತ್ತಿರುವುದು ಬೇಸರದ ವಿಚಾರ.
-ಲಕ್ಷ್ಮಣ ಕೊಡಸೆ, ಕುವೆಂಪು ದರ್ಶನ ಸಂಪುಟ ಸಂಪಾದಕ