

ಚಿಂತಾಮಣಿ: ಸರ್ಕಾರದ ನಿಯಮದಂತೆ ನಾಮಲಕದಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆಯಾಗಬೇಕು ಎಂದು ಚಿಂತಾಮಣಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒತ್ತಾಯಿಸಿದರು.
ಸರ್ಕಾರದ ನಿಯಮದಂತೆ ನಾಮಫಲಕದಲ್ಲಿ ಮೊದಲು ಶೇ.60 ಕನ್ನಡ ಬಳಕೆ, ದಪ್ಪ ಅಕ್ಷರಗಳಲ್ಲಿರಬೇಕು. ಉಳಿದ ಶೇ.40 ಇತರೆ ಭಾಷೆಯಲ್ಲಿ ಬಳಕೆ ಮಾಡಬಹುದು ಎಂದು ಈಗಾಗಲೇ ಸರ್ಕಾರ ಆದೇಶಿಸಿದ್ದರೂ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಇನ್ನು ಮುಂದಾದರೂ ನಾಮಲಕದಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆಯಾಗಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ಆಗ್ರಹಿಸಿದರು. ಪದಾಧಿಕಾರಿಗಳೊಂದಿಗೆ ಸೋಮವಾರ ತಾಲೂಕು ಆಡಳಿತ ಕಚೇರಿ, ನಗರಸಭೆ ಕಚೇರಿಗೆ ತೆರಳಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಈಗಾಗಲೇ ಚಿಂತಾಮಣಿಯ ಹಲವು ಕನ್ನಡ ಪರ ಸಂಘಟನೆಗಳು ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ನಗರದ ಹಲವು ಕಡೆ ಪರಭಾಷಾ ನಾಮಫಲಕಗಳು ಸರ್ಕಾರದ ಆದೇಶ ಗಾಳಿಗೆ ತೂರಿ ರಾರಾಜಿಸುತ್ತಿವೆ. ಹಾಗಾಗಿ ಕೂಡಲೇ ಕಡ್ಡಾಯವಾಗಿ ಕನ್ನಡ ಬಳಕೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಕಾರ್ಖಾನೆಗಳು, ಅಂಗಡಿ ಮಳಿಗೆಗಳು ಸೇರಿ ಇತರೆ ಕಟ್ಟಡಗಳ ಮಾಲೀಕರು ಮೊದಲು ಕನ್ನಡ ಬಳಸಿ ನಾಮಫಲಕಗಳನ್ನು ಹಾಕಬೇಕು. ಇದನ್ನು ನಿರ್ಲಕ್ಷಿಸಿದರೆ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಕಸಾಪ ಮತ್ತು ಇತರ ಕನ್ನಡಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ ಜಾರಿಯಾಗಿ ಹಲವು ವರ್ಷಗಳೇ ಸಂದಿವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಪ್ರತಿ ಇಲಾಖೆ ಮತ್ತು ಸಾರ್ವಜನಿಕರು, ಸಂಘ-ಸಂಸ್ಥೆಗಳು ವ್ಯಾಪಾರ ವಹಿವಾಟುಗಳಲ್ಲಿ ಕನ್ನಡವನ್ನೇ ಮೊದಲ ಭಾಷೆಯಾಗಿ ಬಳಸಬೇಕು ಎಂದರು.
ನಗರಸಭೆ ವತಿಯಿಂದ ಈಗಾಗಲೇ ನಗರದ ಎಲ್ಲ್ಲ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಸರ್ಕಾರದ ಸುತ್ತೋಲೆಯಂತೆ ನಾಮಫಲಕಗಳನ್ನು ಬರೆಸಬೇಕು ಎಂದು ಸೂಚನೆ ನೀಡಿದ್ದೇವೆ. ತಮ್ಮ ಮನವಿಯಂತೆ ಮತ್ತೊಮ್ಮೆ ಕ್ರಮ ತೆಗೆದುಕೊಳ್ಳುತ್ತೇವೆ. - ನಜೀರ್ ಅಹಮದ್ ನಗರಸಭೆ ವ್ಯವಸ್ಥಾಪಕ