

ಸಕಲೇಶಪುರ: ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೆತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಶಿವರಾಜ್ ಹೇಳಿದರು.
ಪಟ್ಟಣದ ತಾಲೂಕು ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ಅವರು ಕವಿಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ತಮ್ಮ ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳಿಂದ ಬೇಸತ್ತು ವಿದ್ಯಾಭ್ಯಾಸವನ್ನು ನಿಲ್ಲಿಸದೆ, ತಮ್ಮ ಗುರುಗಳ ಮೂಲಕ ತಾತ್ವಿಕ ನೆಲೆಗಟ್ಟನ್ನು ಕಂಡು ಕೊಂಡರು. ಇಂಗ್ಲಿಷ್ ಭಾಷೆಯ ಮೇಲೆ ವ್ಯಾಮೋಹ ಇದ್ದರೂ ಮಾತೃಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ಕವಿ ಎಂದು ವರ್ಣಿಸಿದರು.
ಕುವೆಂಪು ಅವರು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ತಮ್ಮ ಸಾಹಿತ್ಯವನ್ನು ತೊಡಗಿಸಿಕೊಂಡಿದ್ದರೆ ಆ ಭಾಷೆಯಲ್ಲಿ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗುತ್ತಿದ್ದರು. ಆದರೆ, ಕನ್ನಡ ಸಾಹಿತ್ಯಕ್ಕೆ ಇಂತಹ ಕವಿ ಸಿಗುತ್ತಿರಲಿಲ್ಲ. ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರದೆ ಎಲ್ಲ ವರ್ಗಗಳಲ್ಲೂ ತಮ್ಮ ಸಾಹಿತ್ಯದ ಕಂಪನ್ನು ಬೀರಿದ್ದಾರೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಡಾ.ಶ್ರುತಿ ಮಾತನಾಡಿ, ಕುವೆಂಪು ಅವರ ತತ್ವಗಳನ್ನು ಪಾಲಿಸುವ ಮೂಲಕ ಅಲ್ಪ ಮಾನವರಾಗುವ ಬದಲು ವಿಶ್ವ ಮಾನವರಾಗಬೇಕಿದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎಂ.ವಿಶ್ವನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಹೆಮ್ಮಿಗೆ ಮೋಹನ್, ಹಾಸನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಕ್ಯಾನಳ್ಳಿ ಸುಬ್ರಹ್ಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಸರ್ಕಲ್ ಇನ್ಸ್‌ಪೆಕ್ಟರ್ ನಿರಂಜನ್, ಶೋಭಾ ಮಂಜುನಾಥ್, ವಾಣಿ, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.