

ಶಿರಸಿ: ಉತ್ತರಕನ್ನಡ ಜಿಲ್ಲಾ 24 ನೇ ಕನ್ನಡ ಸಾಹಿತ್ಯ ಸಮ್ಮೇಳದ ಆಮಂತ್ರಣ ಪತ್ರಿಕೆಯನ್ನು ( Invitation) ಮಂಗಳವಾರ ಶಾಸಕ ಭೀಮಣ್ಣ ನಾಯ್ಕ ತಾಲೂಕು ಆಡಳಿತ ಸೌಧದಲ್ಲಿ ಬಿಡುಗಡೆ ಮಾಡಿದರು.
ನಂತರ ಅವರು ಕಸಾಪ ಹಾಗೂ ಸರ್ಕಾರಿ ಅಧಿಕಾರಿಗಳ ಜಂಟಿ ಸಭೆ ನಡೆಸಿ, ಮಾತನಾಡಿದರು. ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಡಿಸೆಂಬರ್3 ಮತ್ತು 4 ರಂದು ಸಮ್ಮೇಳನ ನಡೆಯಲಿದ್ದು, ಹಿರಿಯ ಸಾಹಿತಿ, ವಿಮರ್ಶಕ ಆರ್. ಡಿ. ಹೆಗಡೆ, ಆಲ್ಮನೆಯವರು ಸರ್ವಾಧ್ಯಕ್ಷರೆ ವಹಿಸುವರು. ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಡಾ. ಗಜಾನನ ಶರ್ಮಾ ಮಾರೋಪ ನುಡಿಗಳನ್ನಾಡಲಿದ್ದಾರೆ. ಎರಡೂ ದಿನ ಹಲವು ಮಹತ್ವದ ವಿಚಾರ ಗೋಷ್ಠಿಗಳು, ಕವಿಗೋಷ್ಠಿಗಳು ನಡೆಯಲಿವೆ ಎಂದು ವಿವರಿಸಿದರು. ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು ಭಾಗವಹಿಸಿ ಮೆರವಣಿಗೆಯನ್ನು ಯಶಸ್ವಿಯಾಗಬೇಕು. ರಾಜ್ಯ ಹಾಗೂ ಜಿಲ್ಲೆಯ ಇತರ ತಾಲೂಕುಗಳಿಂದ ಸಾಹಿತಿಗಳು ಆಗಮಿಸಲಿದ್ದು, ಸಮ್ಮೇಳನದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆಯಾಗುವಂತೆ ಅಧಿಕಾರಿಗಳು ಕಸಾಪ ಜತೆ ಕೈಜೋಡಿಸುವಂತೆ ಸೂಚಿಸಿದರು. ಸಮ್ಮೇಳನ ಜಿಲ್ಲೆಗೆ ಮಾದರಿಯಾಗಬೇಕು. ಶಿರಸಿಯ ಮನೆ, ಮನೆಗಳ ಹಬ್ಬವಾಗಬೇಕು. ವಿವಿಧ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
Invitation ಬಿಡುಗಡೆ ಸಮಾರಂಭದಲ್ಲಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಶಿರಸಿ ಹೆಸರಾಂತ ಕವಿಗಳು, ಸಾಹಿತಿಗಳು, ಸಾಂಸ್ಕೃತಿಕ ವ್ಯಕ್ತಿಗಳು ಹಾಗೂ ಪತ್ರಕರ್ತರನ್ನು ನಾಡಿಗೆ ನೀಡಿದೆ. ಇಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.ಹಾಗಾಗಿ ಶಿರಸಿಯಲ್ಲಿ ಸಮ್ಮೇಳನ ಆಯೋಜಿಸಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿರಬೇಕು ಅದಕ್ಕೆ ಎಲ್ಲ ಕನ್ನಡಾಸಕ್ತರು, ಒಂದಾಗಿ ಬರಬೇಕು ಎಂದು ಆಹ್ವಾನಿಸಿದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ, ತಹಸೀಲ್ದಾರ ಶ್ರಿಧರ ಮುಂದಲಮನಿ, ಡಿವೈಎಸ್‌ಪಿ ಕೆ.ಎಲ್.ಗಣೇಶ, ರೋಟರಿ ಅಧ್ಯಕ್ಷೆ ಡಾ.ಸುಮನಾ ಹೆಗಡೆ, ಸ್ಕೋಡ್‌ವೆಸ್ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ, ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ , ಕಸಾಪ ತಾಲೂಕು ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಇದ್ದರು.