ಕನ್ನಡ ಭಾಷೆಗಿದೆ ತರ್ಕಬದ್ಧ, ವೈಜ್ಞಾನಿಕ ಲಿಪಿ

FotoJet (2)
Published on

ಚಿಂತಾಮಣಿ: ಸುಮಾರು 2500 ವರ್ಷಗಳ ಇತಿಹಾಸವಿರುವ ಭಾಷೆ ನಮ್ಮ ಕನ್ನಡ. ವಿಶ್ವದಾದ್ಯಂತ ಸಹಸ್ರಾರು ಭಾಷೆಗಳಿದ್ದರೂ ಕನ್ನಡ ಭಾಷೆಗೆ ತನ್ನದೆ ಆದ ತರ್ಕಬದ್ಧ, ವೈಜ್ಞಾನಿಕವಾದ ಲಿಪಿ ಇದೆ ಎಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಉದ್ಯಮಿ ಬಿ.ಸಿ.ಪ್ರಸಾದ್ ಹೇಳಿದರು.

ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ಶಾರದಾ ಶಂಕರ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಕನ್ನಡ ಲಿಪಿಗೂ ಹಾಗೂ ಮಾತನಾಡುವ ಭಾಷೆಗೂ ವ್ಯತ್ಯಾಸವಿಲ್ಲ. ದೇವನಾಗರಿ ಭಾಷೆ ಹಾಗೂ ಕನ್ನಡಕ್ಕೂ ಅಪಾರ ನಂಟಿದೆ. 1905ರಲ್ಲಿಯೇ ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಕಟರಾಯರು ಪ್ರಯತ್ನ ಆರಂಭ ಮಾಡಿದರು. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿಎಂಶ್ರೀ ಸೇರಿ ಇನ್ನು ಅನೇಕ ಮಹಾನುಭಾವರುಗಳಿಂದ ಕರ್ನಾಟಕ ಏಕೀಕರಣವಾಯಿತು ಎಂದರು.

ನಮ್ಮದು ಶ್ರೀಮಂತ ಭಾಷೆ, ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ನೀಡಿ ಪಾಲಕರು ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡಿ. ಹೃದಯದ ಭಾಷೆ ಕನ್ನಡವಾಗಿರಬೇಕು, ಕನ್ನಡದ ಭಾವನೆಗಳು ಮಕ್ಕಳಲ್ಲಿ ಮೂಡಬೇಕು ಎಂದರು.

ಸಂಘದ ಅಧ್ಯಕ್ಷ ಎನ್.ಕೃಷ್ಣ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸದ ಹೆಮ್ಮೆಯ ದಿನವನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ಸಂತೋಷ. ಸುಮಾರು ನಾಲ್ಕು ವಷರ್ದಿಂದ ತಾಲೂಕಿನಾದ್ಯಂತ ಇರುವ ವಿಪ್ರ ಬಂಧುಗಳ ಮನೆ ಮನೆಗೆ ಕ್ಯಾಲೆಂಡರ್ ತಲುಪಿಸುತ್ತಿದ್ದೆವು. ಈ ವಷರ್ ಸ್ವಲ್ಪ ವಿಭಿನ್ನವಾಗಿ ಮತ್ತು ಪ್ರಾಯೋಗಿಕವಾಗಿ ಕ್ಯಾಲೆಂಡರ್ ಬಿಡುಗಡೆ ಜತೆಗೆ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಚಿಣ್ಣರಿಂದ ಛದ್ಮವೇಷ, ಭಗವದ್ಗೀತೆ ಪಾರಾಯಣ, ಯೋಗ ಪ್ರದರ್ಶನ, ತಬಲ, ಭರತ ನಾಟ್ಯ, ಏಕಪಾತ್ರಾಭಿನಯ, ಆಶುಭಾಷಣ, ಚಲನಚಿತ್ರ ಗೀತೆಗಳ ಗಾಯನ ಮೂಡಿಬಂತು.

ರಾಜ್ಯ ಸಂಘದ ಪದಾಧಿಕಾರಿಗಳಾದ ಪಲಿಚೆರ‌್ಲು ಪ್ರಕಾಶ್, ಎಸ್‌ಆರ್‌ಇಟಿ ನಾಗೇಶ್, ರವಿಪ್ರಕಾಶ್, ತಾಲೂಕು ಸಂಘದ ಪದಾಧಿಕಾರಿಗಳಾದ ಮುರಳೀಧರ್, ಸುಜಯ, ಲಕ್ಷ್ಮಪ್ಪ, ಮಲ್ಲಿಕಾರ್ಜುನ್, ಟಿ.ಎಲ್.ಆನಂದ್, ಬಿ.ಕೆ.ಕೃಷ್ಣಮೂರ್ತಿ, ರಾಮಚಂದ್ರ, ವಾಸುದೇವಮೂರ್ತಿ, ಲಕ್ಷ್ಮೀನಾರಾಯಣ, ಸುರೇಶ್, ಸೋಮಶೇಖರ, ಕೌಶಿಕ್, ಶ್ರೀರಾಘವೇಂದ್ರಸ್ವಾಮಿ ಮಠದ ನಿರ್ದೇಶಕ ಎನ್.ಎಂ.ರಾಘವೇಂದ್ರ, ವೇ.ಬ್ರ.ಶ್ರೀ ರಮೇಶ್ ಶರ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net