

ಕಿಕ್ಕೇರಿ: ಕನ್ನಡ ಶಾಲೆ ಪ್ರೋತ್ಸಾಹಿಸುವ ಕೆಲಸ ಸಾಂಘಿಕವಾಗಿ ನಡೆದರೆ ಮಾತ್ರ ಕನ್ನಡ ಭಾಷೆ ಉಳಿವು ಸಾಧ್ಯ ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹೇಮಗಿರಿ ಶಾಖಾ ಮಠ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಹೋಬಳಿಯ ಐಕನಹಳ್ಳಿ ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಗುರುವಾರ ಆಯೋಜಿಸಿದ್ದ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಗಾಡಿನ ಮಕ್ಕಳಲ್ಲಿ ಪ್ರತಿಭೆ ಇದ್ದರೂ ಗುರ್ತಿಸುವ ಕೆಲಸವಾಗುತ್ತಿಲ್ಲ. ಸಮರ್ಪಕವಾದ ಮಾರ್ಗದರ್ಶನ ಸಿಕ್ಕರೆ ಅಪರಂಜಿಯಂತೆ ಭವಿಷ್ಯದಲ್ಲಿ ಮಕ್ಕಳು ಹೊಳೆಯಲಿವೆ. ಇಂತಹ ಮಕ್ಕಳನ್ನು ಎಕ್ಕಿ ತೆಗೆಯಲು, ಜ್ಞಾನದ ಹಸಿವು ಹೆಚ್ಚಿಸಿ ಎಂದರು.
ಕನ್ನಡ ಭಾಷೆಗೆ ಮುಪ್ಪಿಲ್ಲ. ಆಂಗ್ಲ ಮಾಧ್ಯಮ ಎನ್ನುವ ಡಾಂಭಿಕತನ ಬೇಡ. ಕನ್ನಡ ಶಾಲೆ, ಮಾತೃಭಾಷೆ ಶಿಕ್ಷಣ ಪಡೆದ ಅಸಂಖ್ಯಾತ ಮಹನೀಯರು ಇಲ್ಲವೆ, ಸರ್ಕಾರಿ ಶಾಲೆ ಕನ್ನಡ ಶಾಲೆ ಉಳಿಯಲು ಕರುನಾಡಿನಲ್ಲಿ ಕನ್ನಡ ಭಾಷೆ ಸಾರ್ವಭೌಮವಾಗಲಿ ಎಂದರು.
ಕನ್ನಡ ಮಾಧ್ಯಮ ಮುಖ್ಯವೋ, ಆಂಗ್ಲ ಮಾಧ್ಯಮ ಮುಖ್ಯವೋ ಎಂಬ ಜಾಣರ ಜಗುಲಿ ವಿಷಯದಲ್ಲಿ ವಿದ್ಯಾರ್ಥಿ ರತ್ನ, ಎ.ಎನ್.ವಿನಾಯಕ, ಟಿ.ಎಸ್. ಪಲ್ಲವಿ, ಹೇಮಶ್ರೀ, ಕನ್ನಡ ಮಾಧ್ಯಮ ಕುರಿತು ಹಾಗೂ ಟಿ.ಸಿ. ರೋಹಿತ್, ಟಿ.ಡಿ. ಧ್ರುವ, ಐ.ಕೆ. ಸ್ಫೂರ್ತಿ, ಐಶ್ವರ್ಯಾ ಆಂಗ್ಲ ಮಾಧ್ಯಮ ಕುರಿತು ವಿಷಯ ಮಂಡಿಸಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಮಕ್ಕಳ ಹುರಿದುಂಬಿಸಿದರು.
ಭಾಗವಹಿಸಿದ್ದ ಮಕ್ಕಳಿಗೆ ವ್ಯೆಯಕ್ತಿಕವಾಗಿ ಜೆ.ಎನ್.ರಾಮಕೃಷ್ಣೇಗೌಡ ನಗದು ಬಹುಮಾನ ನೀಡಿದರು.
ವಿದ್ಯಾರ್ಥಿಗಳು ದೇಶಿಯ ಉಡುಗೆ ಧರಿಸಿ ಪೂರ್ಣಕುಂಭದ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಸಾಗಿದ ತರುವಾಯ ಭತ್ತ ಕುಟ್ಟುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖಂಡರಾದ ಐ.ಬಿ. ಅಣ್ಣಯ್ಯ, ಶಂಕರ್, ದೇವೇಗೌಡ, ಕುಮಾರ್, ಪ್ರವೀಣ, ಮುಖ್ಯಶಿಕ್ಷಕ ಹನುಮಂತೇಗೌಡ, ಶಿಕ್ಷಕ ಪ್ರಕಾಶ್, ಮಂಜುನಾಥ, ಶ್ರೀಧರ್, ಗೋವಿಂದೇಗೌಡ, ಕೋಮಲಾ, ನಂಜುಂಡಸ್ವಾಮಿ, ನಾಗೇಶ್ ಮತ್ತಿತರರು ಹಾಜರಿದ್ದರು.