

ಬೆಂಗಳೂರು: ಆ ಕಾಲಕ್ಕೆ ಹೋರಾಟದ ಮೂಲಕ ಶಾಂತವೇರಿ ಗೋಪಾಲಗೌಡರು ವಿಧಾನಸಭೆ ಪ್ರವೇಶಿದ್ದರು. ಆದರೆ ಈಗ ಹಣಬಲ, ತೋಳ್ಬಲದ ಜೊತೆಗೆ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನದಾಸ್ ಕಳವಳ ವ್ಯಕ್ತಪಡಿಸಿದರು.
ಕನ್ನಡ ಜನಶಕ್ತಿ ಕೇಂದ್ರವು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಬೆಳ್ಳಿ ಸಂಭ್ರಮದ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಯನ್ನು ಸಾಹಿತಿ ಬಿ. ಜಯಪ್ರಕಾಶ ಗೌಡ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಗೋಪಾಲಗೌಡರಂತಹ ಮಹನೀಯರು ಇದ್ದ ವಿಧಾನಸಭೆಯಲ್ಲಿ ಇಂದು ಹಣವಂತರು, ಅಪರಾಧ ಹಿನ್ನೆಲೆಯುಳ್ಳವರು ಇದ್ದಾರೆ. ಇದರಿಂದಾಗಿ ಮೌಲ್ಯಯುತ ರಾಜಕಾರಣಿಗಳ ಸಂಖ್ಯೆ ಕ್ಷೀಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯದ ಕರ್ನಾಟಕ ಸಂಘ ಸ್ಥಾಪಿಸಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿರುವ ಬಿ. ಜಯಪ್ರಕಾಶ ಗೌಡ ಅವರಿಗೆ ಗೋಪಾಲಗೌಡರ ಹೆರಿನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಪಿ.ಇ.ಎಸ್. ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಆರ್. ದೊರೆಸ್ವಾಮಿ, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ. ರಾಮೇಗೌಡ, ಪಿ. ಮಲ್ಲಿಕಾರ್ಜುನಪ್ಪ ಇತರರು ಇದ್ದರು.