ಕನ್ನಡಪರ ಹೋರಾಟಗಾರರಿಗೆ ಆರ್ಥಿಕ ನೆರವು ಕೋರಿ ಸರ್ಕಾರಕ್ಕೆ ಆಗ್ರಹ

KKK
Published on

ಬೆಂಗಳೂರು: ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಸ್ಮರಣಾರ್ಥ ಸಂಕಷ್ಟದಲ್ಲಿರುವ ಕನ್ನಡ ಪರ ಹೋರಾಟಗಾರರಿಗೆ ಆರ್ಥಿಕ ನೆರವು ನೀಡಬೇಕು ಎಂದು ಕನ್ನಡ ಗೆಳೆಯರ ಬಳಗ ಸರ್ಕಾರವನ್ನು ಆಗ್ರಹಿಸಿದೆ.

ಕರ್ನಾಟಕ ಸರ್ಕಾರವು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇನ್ನಾವ ರಾಜ್ಯ ಸರ್ಕಾರವು ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿಲ್ಲ. ಈಗ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳಡಿ ಸಂಕಷ್ಟದಲ್ಲಿರುವ 60 ವರ್ಷಗಳು ದಾಟಿದ ಕನ್ನಡ ಪರ ಹೋರಾಟಗಾರರನ್ನೂ ಪರಿಗಣಿಸಿ, ಮಾಸಾಶನ ಹಾಗೂ ವೈದ್ಯಕೀಯ ನೆರವು ನೀಡಲು ಕ್ರಮವಹಿಸಬೇಕು ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ತಮ್ಮ ವೈಯಕ್ತಿಕ ಜೀವನ ಮರೆತು, ಕನ್ನಡಕ್ಕಾಗಿ ಹೋರಾಟ ಮಾಡಿದ ಕೆಲವರ ಬದುಕು ಶೋಚನಿಯವಾಗಿದೆ. ಇವರಲ್ಲಿ ಬಹಳಷ್ಟು ಮಂದಿ ಹೆಚ್ಚು ವ್ಯಾಸಂಗ ಮಾಡಿಲ್ಲ. ಇಳಿ ವಯಸ್ಸಿನಲ್ಲಿ ಕೆಲ ಹೋರಾಟಗಾರರು ಮನೆಯವರ ತಿರಸ್ಕಾರಕ್ಕೆ ಒಳಗಾಗಿ, ಒಪ್ಪತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಕೆಲವರು ಚಿಕಿತ್ಸೆಗೆ ಹಣವಿಲ್ಲದೆ ಪ್ರಾಣಬಿಟ್ಟ ನಿದರ್ಶನಗಳೂ ಇವೆ. ಇಂತಹವರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯ. ನೆರೆಯ ತಮಿಳುನಾಡು ಸರ್ಕಾರ ನಾಡು-ನುಡಿಯ ಉಳಿವಿಗಾಗಿ ದುಡಿದವರಿಗೆ ಪ್ರತಿ ತಿಂಗಳು 3 ಸಾವಿರ ರೂ. ಆರ್ಥಿಕ ನೆರವು ಮತ್ತು ವೈದ್ಯಕೀಯ ಭತ್ಯೆ ನೀಡುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಯೋಜನೆ ರೂಪಿಸಬೆಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net