ದೇಶೀ ಭಾಷೆಗಳಲ್ಲಿ ಕನ್ನಡಕ್ಕಿದೆ ಪ್ರಮುಖ ಸ್ಥಾನ

IMG_20240106_131109
Published on

ಸುಂಟಿಕೊಪ್ಪ: ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅದುವೇ ಕನ್ನಡದ ಹಿರಿಮೆ ಗರಿಮೆ ಎಂದು ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಣ್ಣಿಸಿದರು.


ಇತ್ತೀಚೆಗೆ ಸುಂಟಿಕೊಪ್ಪದ ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುವರ್ಣ ಕರ್ನಾಟಕ 50ರ ಅಂಗವಾಗಿ ಕೊಡಗು ಜಿಲ್ಲಾ ಕಸಾಪ ಮತ್ತು ಕುಶಾಲನಗರ ತಾಲೂಕು ಕಸಾಪ ಸಂಯುಕ್ತಾಶ್ರಯದಲ್ಲಿ ಕನ್ನಡ ಕೊಡವ ಭಾಷಾ ಬೆಳವಣಿಗೆ ಎಂಬ ವಿಚಾರದ ಬಗ್ಗೆ ಸುಂಟಿಕೊಪ್ಪ ಹೋಬಳಿ ಕಸಾಪ ವತಿಯಿಂದ ನಡೆದ ಮೊಣ್ಣಂಡ.ಕೆ.ಚಂಗಪ್ಪ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಕೊಡವ ಭಾಷೆ ಕುರಿತು ಮಾತನಾಡಿದರು.


ಭಾರತದ ಇತಿಹಾಸದಲ್ಲಿ ಕರ್ನಾಟಕದ ಭಾಷೆ ಸಂಸ್ಕೃತಿ ಪದ್ಧತಿ ಪರಂಪರೆ ಹಬ್ಬ ಹರಿದಿನಗಳಿಗೆ ವಿಶೇಷವಾದ ಮಹತ್ವವಿದೆ. ಇವೆಲ್ಲವೂ ಕನ್ನಡ ಭಾಷೆಯ ಮೂಲಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹೊರಹೊಮ್ಮಿದ್ದು, ಈ ಹಿನ್ನೆಯಲ್ಲಿ ಕನ್ನಡಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ದೇಶೀಯ ಭಾಷೆಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದರು.


ಕನ್ನಡ ಭಾಷೆ ಕೊಡವ, ತುಳು, ಬ್ಯಾರಿ, ಅರೆಭಾಷೆ ಮತ್ತು ಕೊಂಕಣಿ ಭಾಷೆಗಳಿಗೆ ಲಿಪಿಯಾಗಿದ್ದು, ಇತ್ತೀಚೆಗೆ ಕೊಡವ ಭಾಷೆಯಲ್ಲಿ ಹೊಸ ಲಿಪಿ ಅನುಷ್ಠಾನವಾಗಿದ್ದು, ನಿಧನವಾಗಿ ಬಳಕೆಗೆ ಬರುತ್ತಿದೆ ಎಂದ ಅವರು, ಈ ಹಿಂದೆಯೂ ಕೊಡವ ಲಿಪಿ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನಗಳು ಆಗಿದ್ದವು ಎಂಬುದನ್ನು ಉಲೇಖಿಸಿದರು.


ವಿಶೇಷವಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲ ಪ್ರಕಾರದ ಕೊಡವ ಸಾಹಿತ್ಯ ಪ್ರಕಟಣೆಗಳು ಬೆಳಕು ಕಂಡವು ಎಂದು ಹೇಳಿದ ರಮೇಶ್ ಅವರು, ಅಕಾಡೆಮಿಯ ಜತೆಗೆ ಕೊಡವ ಮಕ್ಕಡ ಕೂಟ, ಕೊಡವ ಎಳ್ತ್‌ಕಾರಡ ಕೂಟ ಹಾಗೂ ಕೊಡವ ಪೊಮ್ಮಕ್ಕಡ ಪರಿಷತ್ ಸಾಕಷ್ಟು ಪುಸ್ತಕಗಳನ್ನು ಕೊಡವ ಭಾಷೆಯಲ್ಲಿ ಹೊರತಂದಿದ್ದು, ಕೊಡವ ಭಾಷೆ ಪತ್ರಿಕೆಗಳಾದ ಬ್ರಹ್ಮಗಿರಿ, ಪೂಮ್ಮಾಲೆ, ತೂಕ್‌ಬೊಳಕ್ ಕೊಡವ ಭಾಷೆ ಲೇಖಕರನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿವೆ ಎಂದರು.


ಕೊಡಗಿನಲ್ಲಿ ಎಲ್ಲ ಭಾಷೆ ಮತ್ತು ಧರ್ಮ ಆಚರಿಸುವ ಜನರಿದ್ದು, ಇದು ಮಾದರಿ ಜಿಲ್ಲೆಯಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಮತ್ತು ಕೊಡವ ಭಾಷೆಯ ಪರಸ್ಪರ ಬಾಂಧವ್ಯ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ದಿವಂಗತ ಮೊಣ್ಣಂಡ.ಕೆ.ಚಂಗಪ್ಪ ಅವರ ಹೆಸರಿನಲ್ಲಿ ಅವರ ಪತ್ನಿ ಸರಸ್ವತಿ ಮತ್ತು ಸಹೋದರ ಜೀವನ್ ಚಿಣ್ಣಪ್ಪ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ದತ್ತಿನಿಧಿ ಸ್ಥಾಪಿಸಿದ್ದು ಒಂದು ಮಹತ್ವದ ವಿಚಾರ ಎಂದು ಹೇಳಿದರು.


ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಕಸಾಪ ಹೋಬಳಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ವಹಿಸಿದ್ದರು.
ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿದರು. ಕಸಾಪ ಜಿಲ್ಲಾ, ತಾಲೂಕು ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಕಸಾಪ ತಾಲೂಕು ಸಮಿತಿ ಖಜಾಂಜಿ ಕೆ.ವಿ.ಉಮೇಶ್, ಜಿಲ್ಲಾ ಸಮಿತಿ ಸದಸ್ಯ ರಾಜನ್, ಸುಂಟಿಕೊಪ್ಪ ಹೋಬಳಿ ಕಸಾಪ ಉಪಾಧ್ಯಕ್ಷೆ ಲೀಲಾವತಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಹಾಯಕ ಧರ್ಮಗುರುಗಳಾದ ರೆ.ಫಾ.ವ.ನವೀನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net