

ಆಲೂರು: ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ರಾಯರಕೊಪ್ಪಲು ಗ್ರಾಮದಲ್ಲಿ ಇನ್‌ಸ್ಪ್ರ್ ಶಾಲೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪೂವಯ್ಯ ಮಾತನಾಡಿ, ಕನ್ನಡದ ಬಗ್ಗೆ ಅಭಿಮಾನ ಒಂದು ದಿನಕ್ಕೆ ಸೀಮಿತವಾಗದೆ ಕನ್ನಡದ ಬೆಳವಣಿಗೆಗೆ ಜೀವನ ಪೂರ್ತಿ ಶ್ರಮಿಸಬೇಕೆಂದರು.
ಮಕ್ಕಳ ತಜ್ಞ ಡಾ.ಮಾದಪ್ಪ ಪೈ ಮಾತನಾಡಿ, ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆ ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡು ಬರುತ್ತದೆ ಎಂದು ಹೇಳಿದರು.
ಇನ್ಸ್ಪ್ಪೈರ್ ಶಾಲೆಯ ಸ್ಥಾಪಕ ಅಶೋಕ್ ಶೆಟ್ಟಿ ಮಾತನಾಡಿ, ಕನ್ನಡಿಗರ ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಸಾಕಷ್ಟು ಜನರು ಹಗಲಿರುಳು ದುಡಿದಿದ್ದಾರೆ ಎಂದರು.
ಶಾಲಾ ಮಕ್ಕಳಿಂದ ಭಾಷಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಗ್ರಾಮದ ಹಿರಿಯ ಮುಖಂಡ ನಂಜುಂಡಪ್ಪ, ಕಾರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜು, ಶಾಲಾ ಸಮಿತಿ ಸದಸ್ಯ ಮಂಜೇಗೌಡ, ಸಾಹಿತಿ ಸಮುದ್ರವಳ್ಳಿ ವಾಸು, ಸಮಾಜ ಸೇವಕ ನಾರಾಯಣ ಕುಮಾರ್ ಇತರರು ಇದ್ದರು.