ಕನ್ನಡ ಪರಂಪರೆಯ ಉತ್ತರಾಧಿಕಾರಿಗಳ ಅಗತ್ಯವಿದೆ: ಎಲ್.ಎನ್. ಮುಕುಂದರಾಜ್ ಅಭಿಮತ

kannada Abhyrudhi pradikara
Published on

ಬೆಂಗಳೂರು: ಉದಾರಿಗಳಾದ ಕನ್ನಡಿಗರು ಉದಾಸೀನರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಭವ್ಯ ಪರಂಪರೆಯನ್ನು ಮುಂದುವರಿಸುವವರ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್ ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ವಿಕಾಸಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ ಶಿಬಿರ’ದ 2ನೇ ದಿನದ ಗೋಷ್ಠಿಯಲ್ಲಿ ಮಾತನಾಡಿದರು.

ಹೊರ ರಾಜ್ಯಗಳು ಹಾಗೂ ಹೊರದೇಶಗಳಿಂದ ಕನ್ನಡ ನಾಡಿಗೆ ಬಂದಂತಹ ಜನರಿಗೆ ಕನ್ನಡ ಬಗ್ಗೆ ವಿಶೇಷ ಒಲವಿದೆ. ಆದರೆ ಕನ್ನಡಿಗರೇ ಕನ್ನಡದ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಇದರಿಂದ ಕನ್ನಡ ಕಟ್ಟುವ ಕಾಯಕ ಸಕಾರಗೊಳ್ಳುತ್ತಿಲ್ಲ. ನಮ್ಮ ಈ ದೌರ್ಬಲ್ಯವನ್ನು ಕನ್ನಡೇತರರು ದುರುಪಯೋಗಪಡಿಸಿಕೊಂಡು ಕರ್ನಾಟಕದಲ್ಲಿ ಯಜಮಾನ್ಯ ಸ್ಥಾಪಿಸಲು ಹೊರಟಿದ್ದಾರೆ ಎಂದರು.

ಕನ್ನಡಕ್ಕೆ ಅನನ್ಯ ಕೊಡುಗೆ ನೀಡಿರುವ ಕನ್ನಡಿಗರಲ್ಲದ ವಿದೇಶಿ ವಿದ್ವಾಂಸರು ಎಲ್ಲ ಕಾಲಕ್ಕೂ ಸ್ಮರಣೀಯರು. ಆ ರೀತಿಯಲ್ಲಿ ಕನ್ನಡೇತರರನ್ನು ನಾವು ರೂಪಿಸಬೇಕಿದೆ. ಬೆಂಗಳೂರು ವಿಭಜನೆಯಾಗಿ ಪಾಲಿಕೆಗೆ ಅನ್ಯಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಇಂದು ತರಬೇತಿ ಪಡೆಯುತ್ತಿರುವ ಶಿಕ್ಷಕರು ಕನ್ನಡೇತರರನ್ನು ಪರಿವರ್ತಿಸಬೇಕು ಎಂದು ಹೇಳಿದರು.

ತಂತ್ರಜ್ಞಾನ ಬಳಕೆಯಲ್ಲಿ ವಿಫಲ: ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ (ಸ್ಥಳೀಯ) ಮಟ್ಟದಲ್ಲಿ ಕನ್ನಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಂಗಳೂರಿನಲ್ಲೇ ಭ್ಯವಿರುವ ತಂತ್ರಜ್ಞಾನವನ್ನು ನಮ್ಮ ಭಾಷೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ವಿಫಲರಾಗಿದ್ದೇವೆ. ದೇಶದ ಹಲವು ಕೇಂದ್ರೀಯ ವಿವಿಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 16 ವಿವಿಗಳಲ್ಲಿ ತಮಿಳು ಕಲಿಸಲಾಗುತ್ತಿದೆ. ಆದರೆ ಕನ್ನಡ ಭಾಷಾ ಅಧ್ಯಯನ ವಿಭಾಗ ವಿದೇಶಿ ವಿವಿಗಳಲ್ಲಿ ಇಲ್ಲ. ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿ ಹಲವು ವರ್ಷಗಳಾದರೂ ಅದಿನ್ನೂ ರಾಜ್ಯ ಸರ್ಕಾರದ ಅಡಿಯಲ್ಲಿ ಬಂದಿಲ್ಲ. ಕೇಂದ್ರೀಯ ವಿವಿಗಳಲ್ಲಿ ಕನ್ನಡ ಅಧ್ಯಯನ ಪೀಠವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಅಬ್ದುಲ್ ರೆಹಮಾನ್ ಪಾಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ್ ಮತ್ತು ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net