ಕನ್ನಡವಿರೋಧಿ ಸಿಂಧಿ ಪ್ರೌಢಶಾಲೆ ವಿರುದ್ಧ ಕ್ರಮ : ಡಾ. ಬಿಳಿಮಲೆ ಆಗ್ರಹ

Bilimale
Published on

ಬೆಂಗಳೂರು: ಕುಮಾರ ಪಾರ್ಕ್‌ನಲ್ಲಿರುವ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. ಈ ಸಂಬಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಪತ್ರ ಬರೆಯಲಾಗಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿದ್ದಕ್ಕೆ ದಂಡ ವಿಧಿಸಿರುವುದಾಗಿ ಶಾಲೆಯ ಪ್ರಾಂಶುಪಾಲರೆೇ ಒಪ್ಪಿಕೊಂಡಿರುವ ಬಗ್ಗೆ ದಾಖಲೆಗಳಿವೆ ಎಂದು ತಿಳಿಸಿದ್ದಾರೆ. ರಾಜಧಾನಿಯ ಪ್ರತಿಷ್ಠಿತ ಶಾಲೆಯೊಂದು ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುತ್ತಿರುವುದು ಸರಿಯಲ್ಲ. ಶಾಲೆಯೊಂದು ಕನ್ನಡದ ಕುರಿತು ಲಘು ಧೋರಣೆ ತಳೆದಿರುವುದು ನಕಾರಾತ್ಮಕ ಬೆಳವಣಿಗೆಯಾಗಿದೆ. ಇಂತಹ ಶಾಲೆಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ತನ್ನದೇ ನೆಲದಲ್ಲಿ ಕನ್ನಡ ಪರಕೀಯ ಸ್ಥಾನ ಹೊಂದುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕನ್ನಡ ಪರ ನಿಲುವು ಸಾಬೀತು ಮಾಡಲು ಶಿಕ್ಷಣ ಸಚಿವರು ಮನಸ್ಸು ಮಾಡಬೇಕಿದೆ. ಈ ನೆಲದ ಭಾಷೆ ಉಲ್ಲಂಘಿಸಿರುವ ಸಿಂಧಿ ಪ್ರೌಢಶಾಲೆಯ ಮಾನ್ಯತೆ ರದ್ದುಪಡಿಸಿ ಎನ್‌ಒಸಿ ಹಿಂಪಡೆಯಬೇಕು. ಶಿಕ್ಷಣ ಸಚಿವರ ಕ್ರಮ ಇಡೀ ರಾಜ್ಯವನ್ನು ತಲುಪಿದಲ್ಲಿ ಬೇರೆ ಶಿಕ್ಷಣ ಸಂಸ್ಥೆಗಳಿಗೂ ಪಾಠವಾಗಲಿದೆ. ಕನ್ನಡದ ಹಿತದೃಷ್ಟಿಯಿಂದ ಕಠಿಣ ಕ್ರಮ ಅನಿವಾರ್ಯ ಎಂದು ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net