ಮಹಿಷಿ ವರದಿಗೆ ಅಧಿವೇಶನದಲ್ಲಿ ಕಾಯ್ದೆ ರೂಪ - ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

Dr Purushothama bilimale
Published on

ಬೆಂಗಳೂರು: ಸರ್ಕಾರಕ್ಕೆ ಸಲ್ಲಿಸಿರುವ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿಗೆ ಅಧಿವೇಶನದಲ್ಲಿ ಕಾಯ್ದೆ ರೂಪ ನೀಡಬೇಕೆಂದು ಸರ್ಕಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದು, ಮಹಿಷಿ ಪರಿಷ್ಕೃತ ವರದಿಯಲ್ಲಿ ಅನುಷ್ಠಾನ ಯೋಗ್ಯವಾದ ಸಲಹೆಗಳನ್ನು ನೀಡಲಾಗಿದೆ. ಈ ಅಂಶಗಳ ಬಗ್ಗೆ ಸರ್ಕಾರ ತುರ್ತಾಗಿ ಗಮನಹರಿಸುವ ಅನಿವಾರ್ಯತೆ ಇದೆ. ಕನ್ನಡದ ಉಳಿವು ಹಾಗೂ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ಮಹತ್ವದಾಗಿದೆ. ಅಧಿವೇಶನದಲ್ಲಿ ವರದಿಗೆ ಕಾಯ್ದೆ ರೂಪ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವರದಿಯಲ್ಲಿ ಖಾಸಗಿ ವಲಯದ ವಿವಿಧ ವರ್ಗಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ, ರಾಜ್ಯದಲ್ಲಿ ವ್ಯವಹರಿಸುವ ಬ್ಯಾಂಕುಗಳಲ್ಲಿ ನೇಮಕ ಹೊಂದುವ ಅಭ್ಯರ್ಥಿಗಳಿಗೆ ಕನ್ನಡದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಷರತ್ತು, ಸರ್ಕಾರಿ ವಲಯದ ಉದ್ಯಮಗಳಲ್ಲಿ ಕನ್ನಡಿಗರ ಆದ್ಯತೆಯ ಆಯ್ಕೆ, ಅಪ್ರೆಂಟಿಸ್ ಆಯ್ಕೆಯಲ್ಲಿ, ಕಾರ್ಮಿಕರ ಗುತ್ತಿಗೆ, ದಿನಗೂಲಿ ನೌಕರರ ನೇಮಕಾತಿಗಳಲ್ಲಿ ಕೇವಲ ಕನ್ನಡಿಗರಿಗೆ ಅವಕಾಶ, ತಂತ್ರಜ್ಞಾನ ಬೆಳವಣಿಗೆಗೆ ಅನುಗುಣವಾಗಿ ಉದ್ಯೋಗ ತರಬೇತಿಗೆ ಪ್ರೋತ್ಸಾಹ ಸೇರಿ ಅನುಷ್ಠಾನ ಯೋಗ್ಯವಾದ 14 ಅಂಶಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದ್ದು, ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಕೋರಿದ್ದಾರೆ.

ಕಠಿಣ ನಿರ್ದೇಶನ ನೀಡಿ:

ಭಾಷಾ ವೈಷಮ್ಯದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿ ಮೇಲೆ ನಡೆಸಿರುವ ದಾಳಿ ಖಂಡನೀಯ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ನೇರ ಆಕ್ರಮಣವಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕನ್ನಡಿಗ ಸಿಬ್ಬಂದಿಯ ನೋವಿಗೆ ಸ್ಪಂದಿಸಬೇಕಿದೆ. ಈ ಕುರಿತು ಆಡಳಿತ ಯಂತ್ರಕ್ಕೆ ಕಠಿಣ ನಿರ್ದೇಶನವನ್ನು ನೀಡಬೇಕೆಂದು ಡಾ.ಬಿಳಿಮಲೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net