

ಬೆಂಗಳೂರು: ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತೀರ್ಮಾನಿಸಿದ್ದು, ಈ ಸಂಬಂಧ ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ರಾಜ್ಯಾದ್ಯಂತ ಇರುವ ಕೇಂದ್ರೋದ್ಯಮಗಳು, ಬ್ಯಾಂಕ್‌ಗಳು, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಅನ್ಯಭಾಷಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲದೆ ವ್ಯಾಪಾರ-ವ್ಯವಹಾರಕ್ಕೆಂದು ಬಂದು ಇಲ್ಲೇ ನೆಲೆಯೂರಿದವರಲ್ಲೂ ಅನ್ಯಭಾಷಿಕರು ಇದ್ದಾರೆ. ಅಂತಹವರನ್ನು ಗುರುತಿಸಿ ಕನ್ನಡ ಕಲಿಸುವ ಪ್ರಯತ್ನಕ್ಕೆ ಪ್ರಾಧಿಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇರುವ ಆಸಕ್ತ ಸಂಘ-ಸಂಸ್ಥೆಗಳು ಈ ಬೃಹತ್ ಅಭಿಯಾನಕ್ಕೆ ಸಹಕರಿಸಲು ಸಂಬಂಧಪಟ್ಟ ಜಿಲ್ಲಾಡಳಿತದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಕನ್ನಡ ಕಲಿಕಾ ತರಗತಿ ನಡೆಸಲು ಜಿಲ್ಲಾಡಳಿತಗಳು ಸ್ಥಳಾವಕಾಶ ಒದಗಿಸಲಿವೆ. ಇದಕ್ಕಾಗಿ ವಿಶೇಷ ಪಠ್ಯಕ್ರಮ ಸಿದ್ದಪಡಿಸಿರುವ ಪ್ರಾಧಿಕಾರದಿಂದಲೇ ಕನ್ನಡ ಕಲಿಸುವ ಶಿಕ್ಷಕರಿಗೆ ಗೌರವ ಸಂಭಾವನೆ ನೀಡಲಾಗುವುದು ಎಂದಿದ್ದಾರೆ.
ವಾರದಲ್ಲಿ ಮೂರು ದಿನದಂತೆ ಮೂರು ತಿಂಗಳು ತರಗತಿಗಳನ್ನು ನಡೆಸಲಿದ್ದು, ಕಲಿಕಾರ್ಥಿಗಳಿಂದ ಶಿಕ್ಷಕರ ಬೋಧನಾ ಗುಣಮಟ್ಟವನ್ನು ಅಳೆಯಲು ತೀರ್ಮಾನಿಸಲಾಗಿದೆ. ಈ ಪ್ರಯತ್ನದಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರಿಗೆ ಕನ್ನಡದ ಹೆಸರಿಡಿ
ಬೆಂಗಳೂರು ನಗರ ನಾಲ್ಕು ದಿಕ್ಕುಗಳಲ್ಲೂ ಅತೀ ವೇಗವಾಗಿ ವಿಸ್ತರಣೆ ಹೊಂದಿದ್ದು, ಇಲ್ಲಿನ ಆಡಳಿತ ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚಿಸಿರುವುದು ಸ್ವಾಗತಾರ್ಹ ಪ್ರಯೋಗ. ಆದರೆ ಗ್ರೇಟರ್ ಎನ್ನುವುದಕ್ಕೆ ಪರ್ಯಾಯವಾಗಿ ಕನ್ನಡ ಪದ ಬಳಕೆ ಮಾಡುವುದು ಸೂಕ್ತ ಎಂದಿರುವ ಪುರುಷೋತ್ತಮ ಬಳಿಮಲೆ, ಈ ಕುರಿತು ಸಾರ್ವಜನಿಕರಿಂದ ಸಲಹೆ ಪಡೆದು ಕನ್ನಡದ ಹೆಸರನ್ನು ಇಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆ ಗ್ರೇಟರ್ ಬೆಂಗಳೂರು ವಿಧೇಯಕ ಉಭಯ ಸದನಗಳಲ್ಲಿ ಮಂಡಿಸುವ ಸಂದರ್ಭದಲ್ಲಿ ಉದ್ದೇಶಿತ ವಿಧೇಯಕವು ಪಾಲಿಕೆಗಳ ಆಡಳಿತಕ್ಕೆ ಕನ್ನಡಿಗ ಮಹಾಪೌರರು ಹಾಗೂ ಉಪ ಮಹಾಪೌರರನ್ನು ಆಯ್ಕೆ ಮಾಡುವ ಷರತ್ತನ್ನು ಹೊಂದಿರುವ ರೀತಿಯಲ್ಲಿ ರೂಪಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಿತ್ತು ಎಂಬುದನ್ನು ಈ ವೇಳೆ ಬಿಳಿಮಲೆ ಸ್ಮರಿಸಿದ್ದಾರೆ.