

ಗಂಗೊಳ್ಳಿ: ಭಕ್ತಿಯಿಂದ ಮಾಡುವ ಪೂಜೆ, ವೇದ ಪಠಣಗಳಿಗೆ, ಸಂಗೀತ ನೃತ್ಯಗಳಿಗೆ ಭಗವಂತ ಒಲಿಯುತ್ತಾನೆ. ಭಕ್ತಿ ಎಲ್ಲರಲ್ಲೂ ನಿರಂತರವಾಗಿರಬೇಕು. ಭಗವಂತನ ಮೇಲೆ ಅನನ್ಯ ವಿಶ್ವಾಸವಿರಬೇಕು ಎಂದು ಹಾವೇರಿ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿ ಹೇಳಿದರು.
ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ, ಸುವರ್ಣ ಸಂಭ್ರಮ-ಸಂತಸ ಸಂಗಮ ಕಾರ್ಯಕ್ರಮ ಪ್ರಯುಕ್ತ ಸೋಮವಾರ ಸಮುದ್ರ ನೀರಾಜನ ಸಾಗರೇಶ್ವರ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಗವಂತನ ಸ್ಮರಣೆ ಇದ್ದರೆ ಎಲ್ಲವೂ ಲಭ್ಯ. ಎಲ್ಲವೂ ಪ್ರಾಪ್ತಿಯಾಗುತ್ತದೆ. ಸಮಸ್ಯೆಗಳಿಗೆ ಸಮಾಧಾನ ದೊರೆಯುತ್ತದೆ. ಬದುಕಿನಲ್ಲಿ ಪವಿತ್ರ ಭಾವದಿಂದ ದೇವರನ್ನು ಸ್ಮರಣೆ ಮಾಡಿ ಯಾವುದೇ ಕಾಯಕ ಮಾಡಿದರೆ ಭಗವಂತನ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಡಾ.ಎ.ಚನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ನೇತೃತ್ವದಲ್ಲಿ ಸಮುದ್ರ ನೀರಾಜನ ಸಾಗರೇಶ್ವರ ಪೂಜೆ, ಅಷ್ಟಾವಧಾನ ಸೇವೆ ಮತ್ತಿತರ ಕಾರ್ಯಕ್ರಮ ಸಂಪನ್ನಗೊಂಡಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಖಾರ್ವಿ ಹಾಗೂ ಪದಾಧಿಕಾರಿಗಳು, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚೌಕಿ ಸಂತೋಷ ಖಾರ್ವಿ ಹಾಗೂ ಪದಾಧಿಕಾರಿಗಳು, ಮಹಿಳಾ ಸೇವಾ ಸಮಿತಿ ಪದಾಧಿಕಾರಿಗಳು, ಶ್ರೀರಾಮ ಭಜನಾ ಮಂಡಳಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ರಾಘವೇಂದ್ರ ವಿ.ಕೆ. ಸ್ವಾಗತಿಸಿ, ಪ್ರಾಸ್ತಾವಿಸಿದರು. ಶ್ರೀಗಳನ್ನು ತ್ರಾಸಿ ಸರ್ಕಲ್‌ನಿಂದ ಭಗತ್ ನಗರ ಮಾರ್ಗವಾಗಿ ಶ್ರೀರಾಮ ದೇವಸ್ಥಾನದವರೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಪುರಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಎಲ್ಲ ನದಿಗಳು ಸೇರುವ ಸಮುದ್ರಕ್ಕೆ ಆರತಿ ಬೆಳಗಿ ಪ್ರಾರ್ಥನೆ ಮಾಡಿದರೆ ಎಲ್ಲ ನದಿಗಳಿಗೆ ಪೂಜೆ ಮಾಡಿದ ಫಲ ದೊರೆಯುತ್ತದೆ. ಹೀಗಾಗಿ ಕಂಚುಗೋಡಿನಲ್ಲಿ ನಡೆದ ಸಮುದ್ರ ನೀರಾಜನ ಸಾಗರೇಶ್ವರ ಪೂಜೆ ಪವಿತ್ರ ಕಾರ್ಯ. ಶ್ರೀ ರಾಮಚಂದ್ರನು ಶ್ರಮಜೀವಿಗಳಾದ ಮೀನುಗಾರರ ಎಲ್ಲ ಇಷ್ಟಾರ್ಥ ನೆರವೇರಿಸಿ ಉತ್ತಮ ಮತ್ಸೃ ಸಂಪತ್ತು ಪ್ರಾಪ್ತಿಯಾಗುವಂತೆ ಅನುಗ್ರಹಿಸಲಿ.- ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿ, ಹಾವೇರಿ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು