

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ನೆರೆಗೆ ಕೊಚ್ಚಿ ಹೋಗಿದ್ದ ಬಂಟ್ವಾಳದ ಕಂಚುಗಾರ ಪೇಟೆ ರಸ್ತೆಯ ದುರಸ್ತಿ ಕಾರ್ಯ ಆರಂಭಗೊಂಡಿದೆ. ಹೊಂಡ ಬಿದ್ದ ಜಾಗಕ್ಕೆ ಜೆಸಿಬಿ ಮೂಲಕ ಜಲ್ಲಿಕಲ್ಲುಗಳನ್ನು ತುಂಬಿ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ.
ಕಳೆದ ಜುಲೈ 30ರಂದು ಬಂಟ್ವಾಳ ತಾಲೂಕನ್ನು ಭಾದಿಸಿದ ನೆರೆಗೆ ಕಂಚುಗಾರಪೇಟೆ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ನೆರೆ ನೀರು ಇಳಿದು ಹೋಗುವ ವೇಳೆ ರಸ್ತೆಯ ಡಾಂಬಾರು ತುಂಡು ತುಂಡಾಗಿ ನದಿ ಪಾಲಾಗಿತ್ತು. ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಅಡಿಭಾಗದಲ್ಲಿ ದೊಡ್ಡ ಗುಳಿಗಳು ನಿರ್ಮಾಣಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಆ ಬಳಿಕ ಆ.2ರಂದು ಬಂಟ್ವಾಳಕ್ಕೆ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ರಸ್ತೆಯನ್ನು ಪರಿಶೀಲಿಸಿ ಸಾರ್ವಜನಿಕರ ಉಪಯೋಗದ ದೃಷ್ಟಿಯಿಂದ ತುರ್ತಾಗಿ ರಸ್ತೆಯನ್ನು ದುರಸ್ತಿ ಪಡಿಸಿಕೊಡುವಂತೆ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿಯ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ರಸ್ತೆಯನ್ನು ದುರಸ್ತಿ ಮಾಡಿ ಕೊಡಲಿದೆ ಎಂದು ಸಚಿವರಿಗೆ ತಿಳಿಸಿದ್ದರು. ಆದರೆ ಆ ಬಳಿಕ ಒಂದೂವರೆ ತಿಂಗಳು ಕಳೆದರು ರಸೆ ದುರಸ್ತಿ ಕಾರ್ಯ ನಡೆಯದೆ ವಾಹನ ಸವಾರರು ತೊಂದರೆ ಅನುಭವಿಸಿದ್ದರು.
ಇದು ಪಾಣೆಮಂಗಳೂರು ಪೇಟೆಯಿಂದ ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಸುಲಭದ ರಸ್ತೆಯಾಗಿದೆ. ಪಾಣೆಮಂಗಳೂರು ಭಾಗದಿಂದ ಬಂಟ್ವಾಳಕ್ಕೆ, ಬಂಟ್ವಾಳ ಭಾಗದಿಂದ ಪಾಣೆಮಂಗಳೂರಿಗೆ ಹೋಗಲು ರಿಕ್ಷಾ ಚಾಲಕರು, ಶಾಲಾ ವಾಹನಗಳು ಸೇರಿದಂತೆ ಇನ್ನಿತರ ವಾಹನಗಳಿಗೆ ಈ ರಸ್ತೆ ಹತ್ತಿರದ ರಸ್ತೆಯಾಗಿತ್ತು. ಆದರೆ ನೆರೆಗೆ ಕೊಚ್ಚಿ ಹೊದ ಬಳಿಕ ಕೆಲವೊಂದು ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳು ಮಾತ್ರ ಸರ್ಕಸ್ ಮಾಡಿಕೊಂಡು ಈ ರಸ್ತೆಯಲ್ಲಿ ಸಾಗುತ್ತಿತ್ತು. ರಸ್ತೆಯಲ್ಲಿ ಹೊಂಡದ ಜೊತೆಗೆ ಕೆಸರು ತುಂಬಿಕೊಂಡಿದ್ದರಿಂದ ಶಾಲೆ ವಾಹನಗಳು ಸೇರಿದಂತೆ ಚತುಷ್ಚಕ್ರ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದೆ ಸುತ್ತು ಬಳಸಬೇಕಿತ್ತು.