

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೆ ವರ್ಧಂತ್ಯುತ್ಸವ ಆಚರಣೆ ಸಂದರ್ಭ ಶುಕ್ರವಾರ ಕಂಚಿ ಕಾಮಕೋಟಿ ಪೀಠದ ಸ್ವಾಮೀಜಿಯವರು ಬಳಸುತ್ತಿದ್ದ ಪವಿತ್ರ ರಿಕ್ಷಾವನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಲಾಯಿತು.
ಭಕ್ತರು ತಂದ ರಿಕ್ಷಾವನ್ನು ಧರ್ಮಸ್ಥಳದಲ್ಲಿ ಮಾಹಿತಿ ಕಚೇರಿ ಬಳಿಯಿಂದ ಭವ್ಯ ಮೆರವಣಿಗೆಯಲ್ಲಿ ಹೆಗ್ಗಡೆಯವರ ನಿವಾಸ ಬೀಡಿಗೆ ತರಲಾಯಿತು.
ಕಂಚಿ ಕಾಮಕೋಟಿ ಸ್ವಾಮೀಜಿಯವರು ತಮ್ಮ ಪಾದಯಾತ್ರೆ ಸಂದರ್ಭ ಅವಶ್ಯಕ ವಸ್ತುಗಳಾದ ಪಾದುಕೆಗಳನ್ನು, ಅನುಷ್ಠಾನ ಪಾತ್ರೆಗಳನ್ನು ಮತ್ತು ದರ್ಭಾಸನದ ಸಾಗಾಣಿಕೆಗೆ ಇದನ್ನು ಬಳಸುತ್ತಿದ್ದರು. ಡಾ.ಹೆಗ್ಗಡೆಯವರು ಈ ವಿಶಿಷ್ಟ ಕೊಡುಗೆಯನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಹೇಮಾವತಿ ವಿ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ.ಶ್ರೇಯಸ್ ಕುಮಾರ್, ಸೀತಾರಾಮ ತೋಳ್ಪಾಡಿತ್ತಾಯ, ಹೆಗ್ಗಡೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಕೊಡುಗೆಗಿದೆ ಭವ್ಯ ಇತಿಹಾಸ
ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ ಮ್ಯೂಸಿಯಂಗೆ ಸೈಕಲ್ ರಿಕ್ಷಾವೊಂದು ಕೊಡುಗೆಯಾಗಿ ಬಂದಿರುವುದು ಆದಿ ಶಂಕರಾಚಾರ್ಯರು ಸ್ಥಾಪಿಸಿದ ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕಂಚಿ ಕಾಮಕೋಟಿ ಪೀಠಂನಿಂದ. ಅಲ್ಲಿನ 67ನೇ ಪೀಠಾಧಿಪತಿ ಶ್ರೀ ಮಹಾದೇವೇಂದ್ರ ಸರಸ್ವತಿ ಸ್ವಾಮೀಜಿಯವರು, ಇವರ ನಂತರ ಪೀಠವನ್ನಲಂಕರಿಸಿದ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ನಂತರದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಯವರು ತಮ್ಮ ಪರ್ಯಟನ ಕಾಲದಲ್ಲಿ ಉಪಯೋಗಿಸಿದ ಸೈಕಲ್ ಇದಾಗಿದೆ. ಇದರ ಹಿಂಭಾಗದಲ್ಲಿ ಸ್ವಾಮೀಜಿಯವರು ತಮ್ಮ ಪಾದಯಾತ್ರೆ ಸಂದರ್ಭ ದೇವರೊಂದಿಗೆ ಅವಶ್ಯಕ ವಸ್ತುಗಳಾದ ಪಾದುಕೆಗಳನ್ನು, ಅನುಷ್ಠಾನ ಪಾತ್ರೆಗಳನ್ನು ಮತ್ತು ದರ್ಭಾಸನದ ಸಾಗಾಟಕ್ಕೆ ಬಳಸುತ್ತಿದ್ದರು. ಅವರ ಶಿಷ್ಯರು ಅದನ್ನು ತಳ್ಳಿಕೊಂಡು ಹೋಗುತ್ತಿದ್ದರು. ಸ್ವಾಮೀಜಿಯವರು ಅದರ ಪಕ್ಕದಲ್ಲೇ ನಡೆದುಕೊಂಡು ಬರುತ್ತಿದ್ದರು. ತ್ರಿಚಕ್ರದೊಂದಿಗೆ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಜಿಯವರು ಸಂಪೂರ್ಣ ಭಾರತವನ್ನು ಒಂದು ಬಾರಿ ಸುತ್ತಿ ಬಂದಿದ್ದರೆ, ಅವರ ನಂತರದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಮೂರು ಬಾರಿ ಭಾರತ ಪರ್ಯಟನೆ ಮಾಡಿದ್ದರು. ಈ ಸಂದರ್ಭ ಎರಡು ಬಾರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದರು. ಈಗಿನ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಇದನ್ನು ಜತನವಾಗಿ ನೋಡಿಕೊಂಡಿದ್ದಾರೆ. ಹೀಗಾಗಿ ಈ ವಾಹನ ನಾಲ್ಕು ಪೀಠಾಧಿಪತಿಗಳನ್ನು ನೋಡಿದೆ.
ಅವಿಚ್ಛಿನ್ನ ಸಂಬಂಧ
ಕ್ಷೇತ್ರದ ಹೆಗ್ಗಡೆಯವರಿಗೂ ಕಂಚಿ ಪೀಠಕ್ಕೂ ಬಹುಕಾಲದಿಂದ ಅವಿಚ್ಛಿನ್ನ ಸಂಬಂಧ. ಈಗಿನ ಪೀಠಾಧಿಪತಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಕ್ಷೇತ್ರಕ್ಕೆ ಬಂದು ಅನ್ನಪೂರ್ಣ ಛತ್ರವನ್ನು ಉದ್ಘಾಟಿಸಿದ್ದರು. ಚಾತುರ್ಮಾಸ್ಯ ಸಂದರ್ಭ ಪ್ರಸಾದವನ್ನು ಇಲ್ಲಿಗೆ ತರಲಾಗುತ್ತಿದೆ ಎಂದು ಕಾಂಚಿಪುರದ ಗಣೇಶ ಘನಪಾಠಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದರು.