

ಕನಕಪುರ
ತಂತ್ರಾಂಶ ದುರ್ಬಳಕೆ ಮಾಡಿಕೊಂಡು ನಕಲಿ ಪಹಣಿ ಸೃಷ್ಟಿಸಿ ಗೋಮಾಳ, ಗುಂಡುತೋಪು, ಕೆರೆಕಟ್ಟೆಗಳನ್ನು ಕಬಳಿಸಿ ಸರ್ಕಾರಕ್ಕೆ ಕೋಟ್ಯಂತರ ಹಣ ಲೂಟಿ ಹೊಡೆದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿರುವ ನಗರಸಭೆ ಉಪಾಧ್ಯಕ್ಷ ರಾಮದುರ್ಗಯ್ಯ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಗರಸಭೆ ಎದುರು ರಾಮದುರ್ಗಯ್ಯನ ರಾಜೀನಾಮೆಗೆ ಒತ್ತಾಯಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ನಕಲಿ ಪಹಣಿ ಸೃಷ್ಟಿಸಿರುವ ಪ್ರಕರಣದಲ್ಲಿ ತಹಸೀಲ್ದಾರ್ ಆದಿಯಾಗಿ ಕಂದಾಯ ಇಲಾಖೆ ಅಧಿಕಾರಿಗಳು ಕೈಜೋಡಿಸಿದ್ದಾರೆ. ದಲ್ಲಾಳಿಗಳು, ಪ್ರಬಲ ರಾಜಕಾರಣಿಗಳು ಶಾಮೀಲಾಗಿರುವ ಅನುಮಾನವಿದೆ ಎಂದು ಆರೋಪಿಸಿದರು.
ರಾಮದುರ್ಗಯ್ಯ ಒಬ್ಬನಿಂದ ಇದು ಸಾಧ್ಯವಿಲ್ಲ. ಹಗರಣದ ಸಮಗ್ರ ತನಿಖೆ ನಡೆಯಬೇಕು. ತಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಯಲಿಗೆಳೆಯುವುದರ ಮೂಲಕ ಇಡೀ ಪ್ರಕರಣವನ್ನು ಭೇದಿಸಬೇಕು. ಪ್ರಕರಣದ ಎಲ್ಲ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಬಂಧನದಲ್ಲಿರುವ ರಾಮದುರ್ಗಯ್ಯನ ರಾಜೀನಾಮೆಯನ್ನು ಇದುವರೆಗೂ ಪಡೆಯದಿರುವುದನ್ನು ನೋಡಿದರೆ ಈತನನ್ನು ರಸಲು ಸಂಚು ನಡೆಯುತ್ತಿರುವ ಅನುಮಾನ ಕಾಡುತ್ತಿದೆ. ಜಿಲ್ಲಾಧಿಕಾರಿಗಳು ವಿಳಂಬ ಮಾಡದೆ ಆತನ ರಾಜೀನಾಮೆ ಪಡೆದು ಸದಸ್ಯತ್ವ ರದ್ದುಗೊಳಿಸಬೇಕು ಹಾೂ ಆತನ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅಗ್ರಹಿಸಿದರು.
ಸಂಘಟನೆಯ ಕಾಯಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಕಳಂಕಿತರು ಹಾಗೂ ಭ್ರಷ್ಟರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು ಎಂದರು.
ಪ್ರಗತಿಪರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನೀಲಿ ರಮೇಶ್, ಡಿಎಸ್ಎಸ್ ಅರುಣಕುಮಾರಿ, ರಾಜ್ಯ ರೈತ ಸಂಘದ ಮುಖಂಡರಾದ ಎನ್. ದೇವರಾಜ್, ಆರ್.ವಿ. ಹೊನ್ನೇಗೌಡ, ನಲ್ಲಹಳ್ಳಿ ಶ್ರೀನಿವಾಸ್, ಬೇಕುಪ್ಪೆ ಕೃಷ್ಣಪ್ಪ, ಆನಂದರಾವ್, ನಾಗರಾಜ್, ಗಜೇಂದ್ರಸಿಂಗ್, ಮಾನವ ಹಕ್ಕು ಭ್ರಷ್ಟಚಾರ ವಿರೋಧಿ ಸಂಸ್ಥೆಯ ಹಾರೋಹಳ್ಳಿ ನರಸಿಂಹಯ್ಯ, ಮಹಮ್ಮದ್ ಯಾಕುಬ್ ಪಾಷಾ, ಕೆ.ಆರ್. ಸುರೇಶ್, ಕನ್ನಡ ಪರ ಸಂಘಟನೆ ಎ.ಪಿ.ಕೃಷ್ಣಪ್ಪ ವೀರೇಶ್, ಜಯರಾಮೇಗೌಡ, ಹಾರೋಹಳ್ಳಿ ಗಿರೀಶ್, ಜಯಸಿಂಹ ಏಳಗಳ್ಳಿ ಶಿವರಾಜು, ಯುವಶಕ್ತಿ ವೇದಿಕೆ ಶ್ರೀನಿವಾಸ್, ಕೆ.ಆರ್.ಎಸ್. ಪಕ್ಷದ ಕಚುವನಹಳ್ಳಿ ಕುಮಾರ್ ಮುಂತಾದವರು ಹಾಜರಿದ್ದರು.