ಬಣಗಳನ್ನು ಒಗ್ಗೂಡಿಸಬೇಕು ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ದೇವರಾಜು

11 KKP 01
Published on

ಕನಕಪುರ

ತಾಲೂಕು ಆಡಳಿತದ ರ್ನಿಲಕ್ಷ್ಯ  ಹಾಗೂ ರಾಜಕೀಯವನ್ನು ನಿರ್ನಾಮಗೊಳಿಸುವ ನಿಟ್ಟಿನಲ್ಲಿ ಉದಯವಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕಿನಲ್ಲಿ ಯಾವುದೇ ಬಣಗಳಿಲ್ಲದೆ ಸಂಘದ ಸಂಸ್ಥಾಪಕ ಪ್ರೊ. ನಂಜುಂಡಸ್ವಾಮಿ ಅವರ ಆದರ್ಶದಂತೆ ಮುನ್ನಡೆಸುವ ಪ್ರಯತ್ನ ಆಗಬೇಕಿದೆ ಎಂದು ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ದೇವರಾಜು ಕರೆ ನೀಡಿದರು.

ನಗರದ ಕೋಟೆ ಗಣಪತಿ ದೇವಾಲಯದಲ್ಲಿ ನಡೆದ ರೈತ ಸಂದ ವಿವಿಧ ಬಣಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಈ ಹಿಂದೆ ತಾಲೂಕಿನಲ್ಲಿ ಸಂಘ ಹಾಗೂ ರಾಜಕೀಯ ಸಂಘಟನೆಯನ್ನು ಒಂದೇ ಎನ್ನುವಂತೆ ನೋಡಲಾಗುತ್ತಿತ್ತು. ರೈತ ಸಂಘವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ, ಅಕ್ರಮ ದೌರ್ಜನ್ಯ, ದಬ್ಬಾಳಿಕೆ, ಅಧಿಕಾರಿಗಳು ಮತ್ತು ರಾಜಕಾರಣಿಗಳ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಸಂಘಟನೆಯಾಗಿದೆ. ಆದರೆ, ರೈತ ಸಂಘ ನಾಲ್ಕೈದು ಬಣಗಳಾಗಿ ರೈತರಲ್ಲಿಯೇ ಹೊಂದಾಣಿಕೆ ಇಲ್ಲ ಎನ್ನುವ ಸಂದೇಶ ಸಾರುವ ಪ್ರಯತ್ನ ನಡೆಯುತ್ತಿದೆ ಎಂದರು.

ಇದಕ್ಕೆಲ್ಲ ಉತ್ತರ ನೀಡುವ ನಿಟ್ಟಿನಲ್ಲಿ ರೈತ ಸಂಘದ ವಿವಿಧ ಬಣಗಳನ್ನು ಒಗ್ಗೂಡಿಸಿ 1985ರ ನಂತರ ಸಂಘಟಿತವಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘವನ್ನು ಮುನ್ನೆಲೆಗೆ ತರಬೇಕೆಂದು ಜಿಲ್ಲೆಯಾದ್ಯಂತ ಎಲ್ಲ ಸಂಘಟನೆಗಳು ಒಗ್ಗೂಡಿ ಹೊಸ ಘಟಕಗಳನ್ನು ರಚಿಸಿಕೊಂಡು ಸ್ಥಳಿಯವಾಗಿ ರೈತರು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸಂಘಟಿತರಾಗೋಣ. ಅದಕ್ಕಾಗಿಯೇ ತಾಲೂಕಿನಲ್ಲಿ ಪ್ರಥಮ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ನಗರ ಸೇರಿ 4 ಹೋಬಳಿಗಳ ರೈತ ಸಂದ ಮುಖಂಡರು ಭಾಗಿಯಾಗಿ ಒಳ್ಳೆಯ ಉದ್ದೇಶದಿಂದ ಬಂದಿರುವುದು ಸ್ವಾಗತಾರ್ಹ ಎಂದರು.

ರೈತ ಮುಖಂಡ ಎಂ.ಡಿ.ಶಿವಕುಮಾರ್​ ಸೇರಿ ಅನೇಕ ಮುಖಂಡರು ಸರ್ವಾನುಮತದಿಂದ ರೈತ ವಿವಿಧ ಸಂಘಟನೆಗಳು ಒಗ್ಗೂಡಿ ಹೋರಾಟದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಕನಕಪುರ ತಾಲೂಕಿನ ಅಧ್ಯಕ್ಷರನ್ನಾಗಿ ಉಯ್ಯಂಬಳ್ಳಿ ಸತೀಶ್​ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 4 ಹೋಬಳಿಗಳ ಪದಾಧಿಕಾರಿಗಳ ಆಯ್ಕೆ ಮಾಡಿಕೊಂಡು ರಾಜ್ಯ ಸರ್ಕಾರದ ರೈತ ಹಾಗೂ ಜನವಿರೋಧಿ ನೀತಿಯ ವಿರುದ್ಧ ಜು.19ರಂದು ನಡೆಯುವ ಪ್ರತಿಭಟನೆಯಲ್ಲಿ ತಾಲೂಕಿನ ರೈತರು, ಸಂದ ಪದಾಧಿಕಾರಿಗಳು ಭಾಗಿಯಾಗಿ ಯಶಸ್ವಿಗೊಳಿಸಲು ಮನವಿ ಮಾಡಿದರು.

ಕೆಬ್ಬಳ್ಳಿ ಶಿವರಾಜು, ನಾರಾಯಣಸ್ವಾಮಿ, ಸಂಪತ್​, ಅಂತೋಣಿರಾಜ್​, ವಿನೋದ್​, ಮುತ್ತಪ್ಪ, ರಮೇಶ್​, ಲೋಕೇಶ್​, ಸುರೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net