

ಕನಕಪುರ
ತಾಲೂಕಿನ ರೈತರ ರಾಗಿ ಮಾರಾಟ ಕೇಂದ್ರದಲ್ಲಿ ಅಕ್ರಮ ದಂಧೆ ನಡೆಸಲಾಗುತ್ತಿದೆ ಎಂಬ ಆರೊಪದ ಮೇರೆಗೆ ಲೋಕಾಯುಕ್ತ ಪೋಲಿಸರು ನಗರದ ಮಳಗಾಳು ಸಮೀಪದ ರಾಗಿ ಖರೀದಿ ಕೇಂದ್ರ ಮೇಲೆ ಧೀಡೀರ್ ದಾಳಿ ನಡೆಸಿದರು.
ಲೋಕಾಯುಕ್ತ ವರಿಷ್ಠಾಧಿಕಾರಿ ಪುಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಗಳಾದ ಗೌತಮ್ ಹಾಗೂ ಸುಧೀರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ರಾಗಿ ಕೇಂದ್ರದಲ್ಲಿ ರೈತರ ರಾಗಿಯನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವೇಳೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಸಮೀಪದ ತಮಿಳುನಾಡು ಗ್ರಾಮಾಂತರ ಪ್ರದೇಶದಿಂದ ಕಲಬೆರಿಕೆ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ ರೈತರ ಸುಳ್ಳು ಪಹಣಿ ಮತ್ತು ಆರ್‌ಟಿಸಿಗಳನ್ನು ನೀಡಿ ಹೆಚ್ಚಿನ ಬೆಲೆಗೆ ಇಲ್ಲಿ ಮಾರಾಟ ಮಾಡುತ್ತಿದ್ದಾರೆಂದು ರೈತರು ಇತ್ತೀಚೆಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತಾಲೂಕು ಆಡಳಿತಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಲೋಕಾಯುಕ್ತ ಅಧಿಕಾರಿಗಳು ನಿತ್ಯ ಪರಿಶೀಲನೆ ಮಾಡಿ ಸಮಗ್ರ ವರದಿ ಪಡೆಯುವಂತೆ ಸೂಚಿಸಿದ್ದಾರೆ. ಅಲ್ಲದೆ ಟಿಎಪಿಸಿಎಂಎಸ್‌ನಲ್ಲೂ ನಿತ್ಯ ರೈತರ ರಾಗಿಯನ್ನು ಖರೀದಿಸಿ ಕೊಂಡುಕೊಳ್ಳುವುದು ಮತ್ತು ಮಾರಾಟ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗದಂತೆ ಎಚ್ಚರಿಸಿದರು.
ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್, ಆಹಾರ ಇಲಾಖೆಯ ಶಿರಸ್ತೇದಾರ್ ಪ್ರಕಾಶ್ ಇದ್ದರು.