ವೃದ್ಧೆ ಕೊಂದವನಿಗೆ ಜೀವಾವಧಿ ಶಿಕ್ಷೆ

7 KKP 6
Published on

ಕನಕಪುರ: ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕನಕಪುರ ನ್ಯಾಯಾಲಯ ಆದೇಶ ನೀಡಿದೆ. 

2017ರ ಸೆ.26ರಂದು ಸಾತನೂರು ಪೊಲೀಸ್​ ಠಾಣಾ ವ್ಯಾಪ್ತಿಯ ಹಲಸೂರು ಗ್ರಾಮದ ಒಂಟಿಮನೆ ಪುಟ್ಟಸ್ವಾಮಿ ಎಂಬುವವರ ಮನೆಗೆ ನುಗ್ಗಿ ವಯೋವೃದ್ಧೆ ಕೆಂಪಮ್ಮ (70) ಅವರನ್ನು ಮಚ್ಚಿನಿಂದ ಹೊಡೆದು ಚಿನ್ನದ ಮಾಂಗಲ್ಯ ಸರ ಕದ್ದು ಸಹೋದರರಿಬ್ಬರು  ಪರಾರಿಯಾಗಿದ್ದರು. 

ಈ ಸಂಬಂಧ ವಿಚಾರಣೆ ನಡೆಸಿದ ನಗರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಹೆಚ್​.ಎನ್​.ಕುಮಾರ್​ರವರು ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಚಂದ್ರನಿಗೆ 75 ಸಾವಿರ ದಂಡ ಹಾಗು ಜೀವಾವಧಿ ಶಿಕ್ಷೆ ವಿಧಿಸಿರುವುದು ಅಲ್ಲದೆ ಪೊಲೀಸರ ಮೇಲೆ ಹಲ್ಲೆ ಯತ್ನಕ್ಕೆ 10 ವರ್ಷ ಜೈಲುಶಿಕ್ಷೆ ವಿಧಿಸಿದ್ದಾರೆ. ಚಂದ್ರನ ಸಹೋದರ ಚಿನ್ನಾಭರಣ ಮಾರಿ ಕೃತ್ಯಕ್ಕೆ ಸಹಕರಿಸಿದ್ದ ಆರೋಪದಡಿ 3 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಏನಾಗಿತ್ತು?: ಬೋರೇಗೌಡನದೊಡ್ಡಿಯ ಆರೋಪಿ ಚಂದ್ರ ಎಂಬಾತ ನೀರು ಕೇಳುವ ನೆಪದಲ್ಲಿ ಕೆಂಪಮ್ಮ ಅವರ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ 80 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕದ್ದು ಆತನ ಸಹೋದರ ಸುಂದರ್​ ಎಂಬಾತನಿಂದ ಮಾರಾಟ ಮಾಡಿಸಿದ್ದ. ಈ ಸಂಬಂಧ ಮೃತರ ಮಗ ಶ್ರೀನಿವಾಸ ಸಾತನೂರು ಪೊಲೀಸರಿಗೆ  ದೂರು ನೀಡಿದ್ದರು.

ಅಂದಿನ ಸರ್ಕಲ್​ ಇನ್ಸ್​ಪೆಕ್ಟರ್​ ಕೆ.ಮಲ್ಲೇಶ್​, ಎಸ್​.ಐ. ಅನಂತ್​ರಾಮ್​, ಸಿಬ್ಬಂದಿ ಎಚ್​.ಎನ್​.ಮೋಹನ್​ ಮತ್ತಿತರರ ತಂಡ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಆರೋಪಿ ಚಂದ್ರ ಪೊಲೀಸ್​ ಅಧಿಕಾರಿಗಳಿಗೆ ಚಾಕುವಿನಿಂದ ತಿವಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಪ್ರಾಣ ರಕ್ಷಣೆಗಾಗಿ ಸರ್ಕಲ್​ ಇನ್ಸ್​ಪೆಕ್ಟರ್​ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net