ಜೈನ ಮುನಿ ಹತ್ಯೆ ತನಿಖೆ ಸಿಬಿಐಗೆ ವಹಿಸಿ ವಿವಿಧ ಸಂಘಟನೆಗಳಿಂದ ರಾಜ್ಯಪಾಲರಿಗೆ ಮನವಿ

12 KKP 2
Published on

ಕನಕಪುರ

ಬೆಳಗಾವಿ ಜಿಲ್ಲೆ ಹಿರೇಕೋಡಿ ಜೈನ ಆಚಾರ್ಯ ಜಿನೈಕ್ಯ ಕಾಮಕುಮಾರನಂದಿ ಅವರ ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಜಯಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ತಾಲೂಕು ಕಚೇರಿ ಬಳಿ  ಮೌನಾಚರಣೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಅಹಿಂಸೆಗೆ ಹೆಸರಾದ ಜೈನ ಸ್ವಾಮೀಜಿಯನ್ನು ಅಮಾನವೀಯವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಜೈನ ಮುನಿಗಳಿಗೆ ರಾಜ್ಯದಲ್ಲಿ ರಕ್ಷಣೆ ಒದಗಿಸಬೇಕು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲಿಯೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕೊಲೆ ಸುಲಿಗೆಯಂತಹ ಪ್ರಕರಣಗಳು ಜನರನ್ನು ಭಯಭೀತಿಗೊಳಿಸಿವೆ. ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿ ಅಥವಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವಂತಹ ದಿಟ್ಟ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದರು.

ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಮಲ್ಲಿಕಾರ್ಜುನ್, ಹಿಂದುಪರ ಸಂಘಟನೆಯ ಕೆ.ಆರ್.ಸುರೇಶ್, ಕನ್ನಡ ಸಂಘಟನೆಯ ಹೋರಾಟಗಾರರಾದ ಭಾಸ್ಕರ್, ಶ್ರೀನಿವಾಸ್, ರೈತ ಸಂಘದ ತಾಲೂಕು ಅಧ್ಯಕ್ಷ ಉಯ್ಯಂಬಳ್ಳಿ ಸತೀಶ್, ಕೆ.ರಮೇಶ್, ಮುಖಂಡರಾದ ದೇವರಾಜ್, ಕೆಬ್ಬಳ್ಳಿ ಶಿವರಾಜ್, ನಲ್ಲಹಳ್ಳಿ ಶ್ರೀನಿವಾಸ್, ಮರಳವಾಡಿ ರಾಜಣ್ಣ, ದುಂಡಪ್ಪ, ಅಂಥೋಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net