ಬೆಂಗಳೂರು ಎಂದು ಹೆಸರಾದ ಕನಕಪುರ ಕ್ಷೇತ್ರ

Published on

*ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಕಣ್ಮರೆಯಾಯಿತು ದೇಶದ ದೊಡ್ಡ ಕ್ಷೇತ್ರ

ಗಂಗಾಧರ್ ಬೈರಾಪಟ್ಟಣ ರಾಮನಗರ

ಕನಕಪುರ ದೇಶದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದ ಕ್ಷೇತ್ರ ಎನ್ನುವ ಹೆಗ್ಗಳಿಕೆ ಹೊಂದಿ, 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಯವಾದ ಕ್ಷೇತ್ರ. ಈಗ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರವಾಗಿ ಗುರ್ತಿಸಿಕೊಂಡಿದೆ. ಆದರೆ, ಕನಕಪುರ ಲೋಕಸಭೆ ಯಾವಾಗ ಹುಟ್ಟಿಕೊಂಡಿತು, ಅದಕ್ಕೂ ಮುನ್ನ ಇಂದಿನ ರಾಮನಗರ ಜಿಲ್ಲೆ ಯಾವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಟ್ಟಿತ್ತು ಎನ್ನುವ ಸಮಗ್ರ ಚಿತ್ರಣ ಈ ವರದಿಯಲ್ಲಿದೆ.

ಮಂಡ್ಯ - ಬೆಂಗಳೂರಿನಲ್ಲಿ ಹಂಚಿಕೆ 

ಇಂದಿನ ರಾಮನಗರ ಜಿಲ್ಲೆ 2007ರವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿತ್ತು. 1951ರಿಂದ 1967ರವರೆಗೂ ರಾಮನಗರ ಜಿಲ್ಲೆಯ ಕ್ಷೇತ್ರಗಳು ಪಕ್ಕದ ಮಂಡ್ಯ ಮತ್ತು ಬೆಂಗಳೂರು ಲೋಕಸಭೆ ಕ್ಷೇತ್ರಗಳ ಹರಿದು ಹಂಚಿ ಹೋಗಿದ್ದವು. 1951ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳು ಮಂಡ್ಯ ಲೋಕಸಭೆ ಕ್ಷೇತ್ರದ ಭಾಗವಾಗಿದ್ದರೆ, ರಾಮನಗರ ಮತ್ತು ಮಾಗಡಿ ತಾಲೂಕುಗಳು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದ್ದವು. 1957ರಲ್ಲಿ ಮತ್ತೆ ನಡೆದ ಕ್ಷೇತ್ರ ಪುರ್ನವಿಂಗಡಣೆಯಲ್ಲಿ ಮಾಗಡಿ ತಾಲೂಕಿನ ಕುದೂರು ಮತ್ತು ಸೋಲೂರು ಹೋಬಳಿಗಳು ತುಮಕೂರು ಕ್ಷೇತ್ರದ ಪಾಲಾದರೆ, ಜಿಲ್ಲೆಯ ಉಳಿದ ತಾಲೂಕುಗಳ ಬೆಂಗಳೂರು ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿದ್ದವು. ಮತ್ತೆ 1962ರಲ್ಲಿ ನಡೆದ ಚುನಾವಣೆ ವೇಳೆಗೆ ರಾಮನಗರ ಜಿಲ್ಲೆಯ ನಾಲ್ಕೂ ತಾಲೂಕುಗಳು ಬೆಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಸೇರ್ಪಡೆಗೊಂಡವು.

ಕನಕಪುರ ಉದಯ 

ಕನಕಪುರ ಕ್ಷೇತ್ರ ಉದಯವಾಗಿದ್ದೇ 1967ರ ಕ್ಷೇತ್ರ ಪುರ್ನವಿಂಗಡಣೆ ಸಮಯದಲ್ಲಿ. ಈ ವೇಳೆ ಕನಕಪುರ, ಸಾತನೂರು, ಚನ್ನಪಟ್ಟಣ, ಮಾಗಡಿ, ರಾಮನಗರ, ಆನೇಕಲ್, ಕುದೂರು, ನೆಲಮಂಗಲ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ಕನಕಪುರ ಕ್ಷೇತ್ರ ಉದಯವಾಯಿತು. ಈ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಎಂ.ವಿ.ರಾಜಶೇಖರ ಮೂರ್ತಿ ಮೊದಲ ಸಂಸದರಾದರು.

ಇದಾದ ನಂತರ 1976ರಲ್ಲಿ ನಡೆದ ಕ್ಷೇತ್ರ ಪುರ್ನವಿಂಗಡಣೆಯಲ್ಲಿ ಉತ್ತರಹಳ್ಳಿ, ಕನಕಪುರ, ಸಾತನೂರು, ಚನ್ನಪಟ್ಟಣ, ಮಾಗಡಿ, ರಾಮನಗರ, ಆನೇಕಲ್ ಮತ್ತು ಪಕ್ಕದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಒಳಗೊಂಡ ಹೊಸ ಕನಕಪುರ ಕ್ಷೇತ್ರ ಸೃಷ್ಟಿಯಾಯಿತು. ನಂತರ ಸುಮಾರು ಮೂರು ದಶಕಗಳ ಕಾಲ ಇದೇ ಕ್ಷೇತ್ರ ಉಳಿದುಕೊಂಡು ಹಲವು ಮಹನೀಯರಿಗೆ ಅಧಿಕಾರದ ಗದ್ದುಗೆಯನ್ನು ನೀಡಿತು.

2008ರಲ್ಲಿ ಮತ್ತೆ ಬೆಂಗಳೂರು ಗ್ರಾಮಾಂತರ

ಅತಿ ಹೆಚ್ಚು ಮತದಾರರನ್ನು ಹೊಂದಿದ್ದ ಹೆಗ್ಗಳಿಗೆ ಹೊಂದಿದ್ದ ಕನಕಪುರ ಲೋಕಸಭೆ ಕ್ಷೇತ್ರ 2009ರ ಲೋಕಸಭೆ ಚುನಾವಣೆಯಲ್ಲಿ ಕಣ್ಮರೆ ಆಗಿ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಉದಯವಾಯಿತು. ಹೊಸ ಕ್ಷೇತ್ರಕ್ಕೆ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ತುಮಕೂರಿನ ಕುಣಿಗಲ್, ಸೇರ್ಪಡೆಗೊಂಡವು.

ಮಳವಳ್ಳಿ ಮತ್ತೆ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸೇರ್ಪಡೆಗೊಂಡರೆ, ಆನೇಕಲ್ ಬೆಂಗಳೂರು ಗ್ರಾಮಾಂತರದಲ್ಲಿಯೇ ಉಳಿದುಕೊಂಡಿತು. ಹೊಸ ಕ್ಷೇತ್ರದ ಮೊದಲ ಸಂಸದರಾಗಿ ಎಚ್.ಡಿ.ಕುಮಾರಸ್ವಾಮಿ ಆಯ್ಕೆಗೊಂಡು ಲೋಕಸಭೆ ಪ್ರವೇಶ ಮಾಡಿದರು. ಇದಾದ ನಂತರ 2013ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಡಿ.ಕೆ.ಸುರೇಶ್, 2014 ಮತ್ತು 19ರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದರು.

ಮೈಸೂರು ರಾಜ್ಯ ಎನ್ನುವ ಹೆಸರಿದ್ದಾಗ 1967ರಲ್ಲಿ ಮೊದಲ ಬಾರಿಗೆ ಕನಕಪುರ ಲೋಕಸಭೆ ಕ್ಷೇತ್ರ ಹುಟ್ಟಿಕೊಂಡಿತು. ಆನಂತರ ಕರ್ನಾಟಕ ರಾಜ್ಯ ಎಂದು ಮರು ನಾಮಕರಣವಾದಾಗ 1977ರಿಂದ 2004ರ ಚುನಾವಣೆ ವರೆಗೂ ಈ ಕ್ಷೇತ್ರಕ್ಕೆ ಕನಕಪುರ ಕ್ಷೇತ್ರ ಎಂದೇ ಹೆಸರಿತ್ತು. ಆದರೆ 2009ರಿಂದ ಈ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರವಾಗಿ ಬದಲಾಯಿತು.

ಗೆದ್ದ ಅಭ್ಯರ್ಥಿಗಳ ವಿವರ

ಕ್ರಸಂವರ್ಷ ಗೆದ್ದವರು ಪಕ್ಷ

1.    1967 ಎಂ.ವಿ.ರಾಜಶೇಖರನ್ ಕಾಂಗ್ರೆಸ್

2.   1971 ಸಿ.ಕೆ ಜಾಫರ್ ಷರೀಪ್ ಕಾಂಗ್ರೆಸ್

3. 1977 - 91 ಎಂ.ವಿ ಚಂದ್ರಶೇಖರಮೂರ್ತಿ ಕಾಂಗ್ರೆಸ್

4. 1996 ಎಚ್.ಡಿ ಕುಮಾರಸ್ವಾಮಿ ಜನತಾದಳ

5. 1998 ಎಂ.ಶ್ರೀನಿವಾಸ್ ಬಿಜೆಪಿ

6. 1999 ಎಂ.ವಿ ಚಂದ್ರಶೇಖರ್‌ಮೂರ್ತಿ ಕಾಂಗ್ರೆಸ್

7. 2002 ಎಚ್.ಡಿ.ದೇವೇಗೌಡ ಜೆಡಿಎಸ್ (ಉಪಚುನಾವಣೆ)

8. 2004 ತೇಜಸ್ವಿನಿ ಶ್ರೀರಮೇಶ್ ಕಾಂಗ್ರೆಸ್

9. 2009 ಎಚ್.ಡಿ ಕುಮಾರಸ್ವಾಮಿ ಜೆಡಿಎಸ್

10 2013 ಡಿ.ಕೆ ಸುರೇಶ್ ಕಾಂಗ್ರೆಸ್ (ಉಪಚುನಾವಣೆ)

11. 2014-2024 ಡಿ.ಕೆ.ಸುರೇಶ್ ಕಾಂಗ್ರೆಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net