ರಸ್ತೆ ಅಗಲೀಕರಣ ಯಾವಾಗ? ಸಾರ್ವಜನಿಕರ ಪ್ರಶ್ನೆ ಸಮಸ್ಯೆಗಳು ಉಲ್ಬಣ, ನಾಗರಿಕರ ಪರದಾಟ

6 KKP 2 (2)
????????????????????????????????????
Published on

ಎಂ.ಎನ್​. ಸುರೇಶ್​ ಕನಕಪುರ
ವರ್ಷ ಕಳೆದರೂ ರಸ್ತೆ ಅಭಿವೃದ್ಧಿ ಕಾಮಗಾರಿ ಮುಕ್ತಾಯಗೊಳ್ಳದೆ ಜನರ ಪಾಡು ಹೇಳತೀರದಾಗಿದೆ.
ನಗರದ ಬೂದಿಕೆರೆ ಅಯ್ಯಪ್ಪಸ್ವಾಮಿ ದೇವಾಲಯದಿಂದ ಸಾರಿಗೆ ಬಸ್​ ನಿಲ್ದಾಣದವರೆಗಿನ ಬೂದಿಕೆರೆ ರಸ್ತೆ ಅಗಲೀಕರಣ ಕಾಮಗಾರಿಗೆ 2022ರ ಆಗಸ್ಟ್​ 29ರಂದು ಈಗಿನ ಡಿಸಿಎಂ ಡಿ.ಕೆ.ಶಿವಕುಮಾರ್​ ಚಾಲನೆ ನೀಡಿದ್ದರು. ಅಂದಾಜು 40 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಯೋಜನೆ 2023ರ ಮೇನಲ್ಲಿ ಮುಕ್ತಾಯವಾಗಬೇಕಿತ್ತು.

ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಪೈಪ್​ ಅಳವಡಿಕೆ, ವಿದ್ಯುತ್​ ಲೈನ್​, ಒಳಚರಂಡಿ ಚೇಂಬರ್​ಗಳ ಕೆಲಸ ಮುಗಿಯದೆ ಕಾಮಗಾರಿ ಹದಗೆಟ್ಟಿದೆ. ಅಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷ್ಯ ,ಉದಾಸೀನತೆ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗೆ ಚಾಲನೆ ನೀಡಿದ ನಂತರ ವಿಧಾನಸಭೆ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣೆ ನೀತಿಸಂಹಿತೆಯ ನೆಪ ಹೇಳಿಕೊಂಡು ಅಧಿಕಾರಿಗಳು, ಗುತ್ತಿಗೆದಾರರು ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದೂ ನಾಗರಿಕರ ದೂರಾಗಿದೆ.

ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಸ್ಥಳಿಯ ನಿವಾಸಿಗಳಿಗೆ ಮೂಲಸೌಕರ್ಯ ಸಮಸ್ಯೆ ಎದುರಾಗಿದೆ. ಕಾಮಗಾರಿಗೆ ಮನೆ ಅಂಗಡಿಗಳನ್ನು ಸ್ವತಃ ನಿವಾಸಿಗಳೇ ತೆರವುಗೊಳಿಸಿದ್ದಾರೆ. ರಸ್ತೆ ಇಕ್ಕೆಲಗಳಲ್ಲಿ ಬಾಕ್ಸ್​ ಚರಂಡಿ ನಿರ್ಮಿಸಬೇಕು. ಇದು ಸಮರ್ಪಕವಾಗಿರದ ಕಾರಣ ರಸ್ತೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದ್ದು, ಇದು ಜನರಿಗೆ ತಲೆನೋವಾಗಿದೆ.

ವಿದ್ಯುತ್​ ಸಂಪರ್ಕ ಇಲ್ಲದೆ ತೊಂದರೆಯಾಗಿದೆ. ಅಲ್ಲಲ್ಲಿ ಒಳಚರಂಡಿ ಕಟ್ಟಿಕೊಂಡಿರುವುದರಿಂದ ದುರ್ನಾತ ಬೀರುತ್ತಿದೆ. ಇದರಿಂದ ರೋಗ&ರುಜಿನಗಳು ಹರಡುವುದನ್ನು ತಳ್ಳಿಹಾಕುವಂತಿಲ್ಲ. ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಅಳಲು ತೋಡಿಕೊಂಡರೆ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿದ್ದಿದೆ ಎಂದು ವರ್ತಕರು ಹಿಡಿಶಾಪ ಹಾಕುತ್ತಿದ್ದಾರೆ.

ಸಂಚಾರಕ್ಕೆ ಸಂಚಕಾರ
ರಸ್ತೆ ಕೊಳವೆ ಪೈಪ್​, ಒಳಚರಂಡಿ ಚೇಂಬರ್​ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪ್ರಾರಂಭವಾದಾಗಿನಿಂದಲೂ ರಸ್ತೆಯಲ್ಲಿ ಸಂಚರಿಸುವ ಮಕ್ಕಳು, ಮಹಿಳೆಯರು, ವೃದ್ಧರು ತುಸು ಎಚ್ಚರ ತಪ್ಪಿದರೂ ಬಿದ್ದು ಗಾಯಗೊಳ್ಳುವುದು ಗ್ಯಾರಂಟಿ.

ಒಳಚರಂಡಿ ಅವ್ಯವಸ್ಥೆ
ರಸ್ತೆ ಕಾಮಗಾರಿಯಿಂದಾಗಿ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳ ರ್ನಿಲಕ್ಷ$್ಯದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಪರಸ್ಪರ ಬೊಟ್ಟು ಮಾಡುತ್ತ ಕಾಲಹರಣ ಮಾಡುತ್ತಿದ್ದು, ಈ ಕಾಮಗಾರಿಯ ವೆಚ್ಚವೆಷ್ಟು?, ಪ್ರಾರಂಭದ ದಿನಾಂಕ, ಮುಗಿಯಬೇಕಾದ ದಿನಾಂಕದ ಬಗ್ಗೆ ಮಾಹಿತಿ ಫಲಕ ಅಳವಡಿಸಿಲ್ಲ. ಮನಸೋ ಇಚ್ಛೆ ಕಾಮಗಾರಿ ನಡೆಯುತ್ತಿದೆ. ಈಗಲಾದರೂ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿ ಕಾಮಗಾರಿ ಮುಗಿಸುವರೇ ಎಂದು ಕಾದು ನೋಡಬೇಕು.


ಬೂದಿಕೆರೆ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿ ವರ್ಷವಾದರೂ ಮುಗಿದಿಲ್ಲ, ಇಲ್ಲಿನ ಯುಜಿಡಿ ಅಳವಡಿಕೆಯಿಂದ ತೊಂದರೆಯಾಗುತ್ತಿದೆ. ಗುತ್ತಿಗೆದಾರರು ಯಾರು ಎನ್ನುವುದೂ ಗೊತ್ತಿಲ್ಲ. ಈ ಕಾಮಗಾರಿಯಿಂದ ಮಳೆ ಬಂದಾಗ ಮನೆಯೊಳಗೆ ಚರಂಡಿ ನೀರು ನುಗ್ಗುತ್ತಿದೆೆ. ರಸ್ತೆ ಕಾಮಗಾರಿ ಮುಗಿದ ಮೇಲೆ ನಮ್ಮ ಬದುಕು ಹೇಗೋ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ಮೂಲಕೊಂಡಯ್ಯ, ಬೂದಿಕೆರೆ

ಬೂದಿಕೆರೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ನಗರಸಭೆಯಿಂದ ಕೈಗೆತ್ತಿಕೊಳ್ಳಲಾಗಿತ್ತು. ಯುಜಿಡಿ ಇತರ ಕಾಮಗಾರಿಗಳು ಮುಗಿದ ತಕ್ಷಣವೇ ಕಾಂಕ್ರೀಟ್​ ರಸ್ತೆ ಕಾಮಗಾರಿಯನ್ನು ಶ್ರೀವಾಗಿ ಪೂರ್ಣಗೊಳಿಸಲಾಗುವುದು.
 ಮೂರ್ತಿ, ಎಇ, ಲೋಕೋಪಯೋಗಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net