

ಕನಕಗಿರಿ: ಸರ್ವೋಚ್ಛ ನ್ಯಾಯಾಲಯ ನೀಡಿದ ಆದೇಶದಂತೆ ಒಳಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರ್ ವಿಶ್ವನಾಥ ಮುರುಡಿ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಜಾತಿ ಜನಾಂಗಕ್ಕೆ ಆಯಾ ರಾಜ್ಯಗಳಿಗೆ ಒಳ ಮೀಸಲಾತಿ ವರ್ಗೀಕರಣವನ್ನು ಅನುಷ್ಠಾನಗೊಳಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ, ಸಿಎಂ ಸಿದ್ದರಾಮಯ್ಯಗೆ ದಲಿತರ ಮೇಲೆ ಕಾಳಜಿ ಇದ್ದಲ್ಲಿ ಚುನಾವಣೆ ಪೂರ್ವದಲ್ಲಿ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಿ, ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ರಮೇಶ ಅಂಗಡಿ, ತಾಲೂಕಾಧ್ಯಕ್ಷ ಮಂಜುನಾಥ ಬಡಿಗೇರ, ಮಲ್ಲಿಕಾರ್ಜುನ ಯರಡೋಣ, ದುರುಗಪ್ಪ ಕನಕಗಿರಿ, ಯಂಕೋಬ, ವೆಂಕಟೇಶ ನಿರ್ಲೂಟಿ, ಸುಮಿತ್ರಕುಮಾರ ಇತರರಿದ್ದರು.