

ಕನಕಗಿರಿ: ಪಟ್ಟಣದ ಶ್ರೀಸುವರ್ಣಗಿರಿ ಸಂಸ್ಥಾನ ವಿರಕ್ತಮಠ (ಕಲ್ಮಠ)ದಲ್ಲಿ ಗುರುವಾರ 110 ಅಸ್ತಮಾ ರೋಗಿಗಳಿಗೆ ಔಷಧಿಯನ್ನು ವಿತರಿಸಲಾಯಿತು.
ಕಲ್ಮಠದ ಶ್ರೀ ಡಾ.ಚೆನ್ನಮಲ್ಲ ಸ್ವಾಮೀಜಿ ಮಾತನಾಡಿ, 1997ರಲ್ಲಿ ಈ ಹಿಂದಿನ ಪೀಠಾಧಿಪತಿಗಳಾದ ಲಿಂ.ರುದ್ರಮುನಿ ಮಹಾಸ್ವಾಮಿಗಳು ಮೃಗಶಿರ ಮಳೆ ಕೂಡುವ ಸಂದರ್ಭದಲ್ಲಿ ಅಸ್ತಮಾ, ದಮ್ಮು, ಕೆಮ್ಮು ರೋಗಕ್ಕೆ ಔಷಧಿ ವಿತರಿಸುವ ಪರಂಪರೆಗೆ ನಾಂದಿ ಹಾಡಿದ್ದು, ಕರೊನಾದ 2 ವರ್ಷ ಹೊರತುಪಡಿಸಿ ಅಂದಿನಿಂದ ಇಂದಿನವರೆಗೆ ಮಠದಲ್ಲಿ ಔಷಧಿ ನೀಡುವ ಕಾಯಕ ಮುಂದುವರಿದಿದೆ. ಈ ಔಷಧಿ ಸೇವನೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಅಸ್ತಮಾಕ್ಕೆ ರಾಮಬಾಣವಾಗಿದೆ ಎಂದರು.
ಇದನ್ನೂ ಓದಿ: ಅಸ್ತಮಾ ನಿಯಂತ್ರಣಕ್ಕೆ ಯಾವ ಯೋಗಾಸನ ಸಹಕಾರಿ?
ವೈದ್ಯ ಬಸವರಾಜ ಹಿರೇಮಠ ಮಾತನಾಡಿ, ಜೀವನದಲ್ಲಿ ಆರೋಗ್ಯವೇ ಭಾಗ್ಯವಾಗಿದ್ದು, ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ಮಹತ್ವ ನೀಡಬೇಕಿದೆ. ಈ ನಿಟ್ಟಿನಲ್ಲಿ ಆಯುರ್ವೇದ ಪದ್ಧತಿಯಲ್ಲಿ ಅಸ್ತಮಾ ರೋಗಿಗಳಿಗೆ ಈ ಹಿಂದೆ ರುದ್ರಮುನಿ ಮಹಾಸ್ವಾಮಿಗಳು ಆರಂಭಿಸಿದ್ದನ್ನು ಪ್ರಸ್ತುತವಾಗಿ ನಡೆಸಿಕೊಂಡು ಬರುತ್ತಿದ್ದು, ರೋಗಿಗಳು ಮಠದಿಂದ ನೀಡಲಾಗುವ ಔಷಧಿ ಸೇವಿಸಿ ಆರೋಗ್ಯವಾಗಿರಬೇಕು ಎಂದರು. ಡಾ. ದೊಡ್ಡಯ್ಯ ಅರವಟಗಿಮಠ, ಪ್ರಮುಖರಾದ ಬಸವರಾಜ ಗುಗ್ಗಳಶೆಟ್ರ, ಪ್ರಶಾಂತ ಪ್ರಭುಶೆಟ್ಟರ್, ವಾಗೇಶ ಹಿರೇಮಠ ಇತರರಿದ್ದರು.