

ಕಿಕ್ಕೇರಿ: ದಾಸ ಸಾಹಿತ್ಯದ ಮೂಲಕ ಕನ್ನಡದ ಬೇರನ್ನು ಗಟ್ಟಿಗೊಳಿಸಿದ ಮಹಾನ್ ಸಂತ ಕನಕದಾಸರು ಎಂದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಬಣ್ಣಿಸಿದರು.
ಇಲ್ಲಿನ ಸ್ಪಂದನಾ ಫೌಂಡೇಷನ್, ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಕನಕ ಸ್ಮರಣೆ ಹಾಗೂ ಸುಗಮ ಸಂಗೀತ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕನಕದಾಸರ ಸಾಹಿತ್ಯ, ಕೀರ್ತನೆ, ದಾಸಪದಗಳು ಜಾತಿ ಸಂಕೋಲೆಯನ್ನು ಬಿಟ್ಟು ನಾನು ಎಂಬ ಮೋಹ ತೊರೆದು ವಿಶ್ವಮಾನವರಾಗಿ ಎಂದು ಸಾರುವ ಅಮೃತವಾಣಿಯಾಗಿವೆ ಎಂದರು.
ಕನಕರ ದೈವತ್ವ ಚಿಂತನೆ ಸಾಮಾಜಿಕ ಅಸಮಾನತೆ ತೊಲಗಿಸಿ, ಮನುಷ್ಯರಾಗಿ ಮಾನವತಾವಾದಿಯಾಗಿ ಬದುಕುವ ಸಾರವಾಗಿದೆ. ಸುಗಮ ಸಂಗೀತ ಪ್ರಾಕಾರದಲ್ಲಿ ಭಾವಗೀತೆ, ತತ್ವಪದ, ವಚನ, ದಾಸರ ಪದಗಳ ಹೂರಣ ಅಡಗಿದೆ. ಕನಕರು ಒಂದು ಜಾತಿಗೆ ಮೀಸಲಾಗದ ವಿಶ್ವಜ್ಞಾನಿ ಸಂತರು. ನಾನು ಎಂಬ ಮೋಹದ ಅಹಂ ಬಿಡಿ. ಜಾತಿ ಸಂಕೋಲೆಯಿಂದ ಹೊರಬನ್ನಿ. ಅಂದು ಕನಕರು ಬಿತ್ತಿದ್ದ ಸಾಮರಸ್ಯದ ಕೀರ್ತನೆ, ಮುಂಡಿಗೆ(ಒಗಟಿನ ರೂಪದ ಗೀತಗುಚ್ಛ) ಬೀಜ ಎಲ್ಲೆಡೆ ಮೊಳಕೆ ಒಡೆದಿದ್ದು, ಸಮಷ್ಟಿಯಲ್ಲಿ ಸಮೃದ್ಧವಾಗಿ ಬೆಳೆಸುವ ಕಾಯಕಲ್ಪ ಎಲ್ಲರದಾಗಿರಲಿ ಎಂದು ಆಶಿಸಿದರು.
ಗಾಯಕರು ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ನಮ್ಮಮ್ಮ ಶಾರದೆ ಉಮಾಮಹೇಶ್ವರಿ ಮುಂತಾದ ಗೀತೆಗಳನ್ನು ಮಕ್ಕಳು ಹಾಡಿದರು. ಗಾಯಕಿ ಸೀಮಾರಾಯ್ಕರ್, ಕನಕರ ಗುರು ಬಂದಾ, ಪುಟಿಪುಟಿದು ಬಂದಾ ಬಂಗಾರ ಕನಕ ಎಂಬ ಗೀತೆಯೊಂದಿಗೆ ಕನಕರನ್ನು ಸ್ಮರಿಸಿದರು. ಕನಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕನಕ ಕೀರ್ತನೆ ಹಾಡಿದ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಟ್ರಸ್ಟಿ ತ್ರಿವೇಣಿ, ಪುಷ್ಪಲತಾ, ಕವಿತಾ, ಮಹೇಂದ್ರ ಮತ್ತಿತರರಿದ್ದರು.