ಕನಕ ಕಲಾ ವೈಭವ ಸಮಾಜದ ಕೈಗನ್ನಡಿ: ನಿವೃತ್ತ ಇಂಜಿನಿಯರ್ ಆನಂದ್ ಅಡಿಗಣ್ಣಾರ

hnl
Published on

ಹೊನ್ನಾಳಿ: ಆಧುನಿಕ ಸಂಸ್ಕೃತಿ, ಡಿಜೆ, ಚಲನಚಿತ್ರಗೀತೆಗಳು ಇಂದಿನ ಯುವ ಪೀಳಿಗೆ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಆದರೆ ನಮ್ಮ ಪುರಾತನ ಸಂಸ್ಕೃತಿಯ ಪ್ರತಿಬಿಂಬ ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವ ಹೆಚ್ಚು ಅರ್ಥಪೂರ್ಣವಾಗಿದ್ದು ಯುವ ಜನತೆ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ ಎಂದು ನಿವೃತ್ತ ಇಂಜಿನಿಯರ್ ಆನಂದ್ ಅಡಿಗಣ್ಣಾರ ಹೇಳಿದರು.

ಪಟ್ಟಣದ ದೊಡ್ಡಕೇರಿಯಲ್ಲಿ ಇತ್ತೀಚೆಗೆ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿ, ದೊಡ್ಡಕೇರಿ ಕಾ ರಾಜಾಗಣಪತಿ ಯುವಕರ ಸೇವಾ ಸಮಿತಿ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಹಾಲುಮತ ಜಾನಪದ ಕಲಾಕೇಂದ್ರ ಹೊನ್ನಾಳಿ ಶಾಖೆ ಸಂಯುಕ್ತಾಶ್ರಯದಲ್ಲಿ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ. ನಾಗರಾಜ್ ಅವರು ಕಳೆದ 28 ವರ್ಷಗಳಿಂದ ನಿರಂತರವಾಗಿ ಶ್ರೀ ಕನಕದಾಸರ ಕೀರ್ತನೆಯನ್ನು ಉಳಿಸಿ ಬೆಳೆಸುವ ಅಭಿಯಾನವನ್ನು ಮಾಡುತ್ತಿರುವುದು ಶ್ಲಾಘನೀಯ. ಹಾಲುಮತ ಸಂಸ್ಕೃತಿ, ಕನಕ ಕಲಾ ವೈಭವ ಸಮಾಜದ ಕೈಗನ್ನಡಿಯಾಗಿದೆ ಎಂದರು.

ಬೀರಪ್ಪನ ಪಾತ್ರದಲ್ಲಿ ಪತಂಜಲಿ ಜೆ. ನಾಗರಾಜ್, ಕನಕದಾಸರ ಪಾತ್ರದಲ್ಲಿ ನಿವೃತ್ತ ಇಂಜಿನಿಯರ್ ಎಂ. ಪೂವಯ್ಯ, ಹಿನ್ನೆಲೆ ಗಾಯಕರಾಗಿ ಹಿರಿಯ ಕಲಾವಿದ ಚನ್ನರಾಜ್, ಕಲಾವಿದೆ ನಾಗರತ್ನಾ, ತಬಲ ಕಲಾವಿದ ಶ್ಯಾಮ್ ಮಿರಜ್​ಕರ್, ಹಾರ್ಮೋನಿಯಂ ಕಲಾವಿದ ಕೀಬೋರ್ಡ್ ಸಿದ್ದಪ್ಪ, ರಿದಂ ಪ್ಯಾಡ್ ಕಲಾವಿದ ವಿಟ್ಟು ಮಿರಜ್​ಕರ್, ಸಹ ಕಲಾವಿದರಾದ ಮಂಜುಳಾ, ಲಲಿತಾ, ಉಷಾ, ಶಿವಲೀಲಾ, ಮೋಹನ್​ಆಚಾರ್, ಮಂಜುನಾಥ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದರು.

ಇದೇ ವೇಳೆ ಎಸ್​ಎಸ್​ಎಲ್​ಸಿ, ಪಿಯುಸಿ ಮತ್ತು ಪದವಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಮಾಡಲಾಯಿತು. ಪತಂಜಲಿ ಸಂಸ್ಥೆ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವುಲೆ, ಕನಕ ನಗರದ ದೊಡ್ಡಪ್ಪ, ಪತಂಜಲಿ ಹೊನ್ನಾಳಿ ಶಾಖೆಯ ಕಾರ್ಯದರ್ಶಿ ಮಾಜಿ ಸೈನಿಕ ವಾಸಪ್ಪ, ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿ, ದೊಡ್ಡಕೇರಿ ಕಾ ರಾಜಾಗಣಪತಿ ಯುವಕರ ಸೇವಾ ಸಮಿತಿಯ ಪದಾಧಿಕಾರಿಗಳು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net