

ಚನ್ನರಾಯಪಟ್ಟಣ: ಕನಕ ಜಯಂತಿಯನ್ನು ನವೆಂಬರ್ 30 ರಂದು ತಾಲೂಕು ಕೇಂದ್ರದಲ್ಲಿ ಅರ್ಥಪೂರ್ಣ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಕನಕ ಜಯಂತಿ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ.30 ರಂದು ಬೆಳಗ್ಗೆ 10ಕ್ಕೆ ಕೃಷಿ ಇಲಾಖೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಿದ್ದು, 5 ಜನ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.
ಮಧ್ಯಾಹ್ನ 12.30ಕ್ಕೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ತಹಸೀಲ್ದಾರ್ ಕಚೇರಿಯಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ನವೋದಯ ವೃತ್ತ, ಕುವೆಂಪು ವೃತ, ಸಾರ್ವಜನಿಕ ಆಸ್ಪತ್ರೆ ರಸ್ತೆ ಮಾರ್ಗವಾಗಿ ಕೃಷ್ಣರಾಜ ಒಡೆಯರ್ ವೃತ್ತದ ಮುಖಾಂತರ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಉಪಾಹಾರ ಹಾಗೂ ಕುಡಿಯವ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕೊಡಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ನಿರ್ದೇಶನ ನೀಡಿದರು.
ತಹಸೀಲ್ದಾರ್ ಬಿ.ಎಂ.ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಪುರಸಭಾ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್ ಕುಮಾರ್, ಶಿರಸ್ತೇದಾರ್ ಪವನ್, ಸಿಡಿಪಿಒ ಇಂದ್ರ, ಕಾರ್ಮಿಕ ನಿರೀಕ್ಷಕ ಪುರುಷೋತ್ತಮ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಮಂಜಪ್ಪ, ಕಬ್ಬಾಳು ಮಹೇಶ್, ಕಬ್ಬಾಳು ರಮೇಶ್, ಜಗದೀಶ್, ಈಶ್ವರ್, ನಂಜಪ್ಪ ಇತರರು ಇದ್ದರು.