ದಾಸಶ್ರೇಷ್ಠ ಕನಕದಾಸ

JDS_Kanaka
Published on

ತುಮಕೂರು: ಸಮಾಜಕ್ಕೆ ಕೊಡುಗೆ ಕೊಟ್ಟ ಮಹನೀಯರನ್ನು ಜನ ಸದಾ ಕಾಲ ಸ್ಮರಿಸುತ್ತಾರೆ. ಅನಿಷ್ಟ ಪದ್ಧತಿ, ಕೆಟ್ಟ ಜಾತಿ ವ್ಯವಸ್ಥೆ ವಿರುದ್ಧ ಜನಜಾಗೃತಿ ಮೂಡಿಸಿ, ಭಕ್ತಿ, ಭಾವೈಕ್ಯತೆ ಸಾರಿದ ದಾಸಶ್ರೇಷ್ಠ ಕನಕದಾಸರು ಸಾರ್ವಕಲಿಕ ಸ್ಮರಣೀಯರು ಎಂದು ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಸಿ.ಆಂಜಪ್ಪ ಹೇಳಿದರು.

ನಗರದ ಜಿಲ್ಲಾ ಜೆಡಿಎಸ್​ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ ಅವರು, ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾನುಭಾವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಅವರ ಜಯಂತಿ ಆಚರಣೆ ಮಾಡುವ ಮೂಲಕ ನಾವು ಅವರ ಕೊಡುಗೆ ಸ್ಮರಿಸಿ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಾತಿ ವ್ಯವಸ್ಥೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಸಮಾನತೆಗಾಗಿ ಭಕ್ತಿಭಾವದ ಕೀರ್ತನೆಗಳ ಮೂಲಕ ಕನಕದಾಸರು ಎಲ್ಲೆಡೆ ಸಂಚಾರ ಮಾಡಿ ಜನರನ್ನು ಜಾಗೃತಿಗೊಳಿಸುವ ಪ್ರಯತ್ನ ಮಾಡಿದರು. ಅವರು ಎಲ್ಲಾ ಕಾಲಕ್ಕೂ ಸಲ್ಲುವ ಸಂದೇಶ ಸಾರುವ ಕೀರ್ತನೆಗಳ ದೊಡ್ಡ ಭಂಡಾರವನ್ನೇ ರಚಿಸಿದ್ದಾರೆ. ಕನಕದಾಸರ ಸಾಮಾಜಿಕ ಕಳಕಳಿಯನ್ನು ಗೌರವಿಸಬೇಕು ಎಂದು  ಹೇಳಿದರು.

ಜಿಲ್ಲಾ ಜೆಡಿಎಸ್​ ಕಾರ್ಯಾಧ್ಯಕ್ಷ ಟಿ.ಆರ್​.ನಾಗರಾಜು ಮಾತನಾಡಿ, ಕುಲಕುಲವೆಂದು ಹೊಡೆದಾಡಬೇಡಿ ಎಂದು ಕನಕದಾಸರು ಜಾತಿ-ಕುಲದ ಭೇದ ಬೇಡ, ಎಲ್ಲರೂ ಸಮಾನರು ಎಂಬ ಸಂದೇಶ ಸಾರಿ ಸಾಮಾಜಿಕ ಸಾಮರಸ್ಯಕ್ಕೆ ಶ್ರಮಿಸಿದ್ದರು. ನಾಡಿನೆಲ್ಲೆಡೆ ಸಂಚಾರ ಮಾಡಿ ಹಳ್ಳಿಹಳ್ಳಿಗಳಲ್ಲೂ ತಮ್ಮ ಕೀರ್ತನೆಗಳ ಮೂಲಕ ಮೂಢನಂಬಿಕೆ ವಿರುದ್ಧ ಜನರಲ್ಲಿ ಅರಿವು ಮೂಡಿಸಿದರು. ಶ್ರೀಕೃಷ್ಣನ ಪರಮಭಕ್ತರಾದ ಕನಕದಾಸರು ಉಡುಪಿ ಕೃಷ್ಣನ ದರ್ಶನಕ್ಕೆ ಅವಕಾಶ ಸಿಗದಿದ್ದಾಗ. ಇವರ ಭಕ್ತಿಗೆ ಒಲಿದು ಕೃಷ್ಣನೇ ಇವರತ್ತ ತಿರುಗಿದನು. ಇಂತಹ ಮಹಾನುಭಾವರು ಈ ನೆಲದ ಶಕ್ತಿಯಾಗಿದ್ದಾರೆ ಎಂದರು.

ರಾಜ್ಯ ಜೆಡಿಎಸ್​ ಉಪಾಧ್ಯಕ್ಷ ದಾಂಡೇಲಿ ಗಂಗಣ್ಣ, ರಾಜ್ಯ ಎಸ್​.ಟಿ. ಘಟಕ ಉಪಾಧ್ಯಕ್ಷ ಸೋಲಾರ್​ ಕೃಷ್ಣಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ಹೆಚ್​.ಡಿ.ಕೆ. ಮಂಜುನಾಥ್​, ಟಿ.ಹೆಚ್​.ಬಾಲಕೃಷ್ಣ, ಧರಣೇಂದ್ರಕುಮಾರ್​, ಎಸ್​.ಸಿ.ಘಟಕ ಜಿಲ್ಲಾಧ್ಯಕ್ಷ ಎಸ್​.ಡಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಲ್​.ಟಿ.ಗೋವಿಂದರಾಜು, ನಗರ ಅಧ್ಯಕ್ಷ ಭೈರೇಶ್​, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಜಿಲ್ಲಾ ಉಪಾಧ್ಯಕ್ಷ ಸೊಗಡು ವೆಂಕಟೇಶ್​, ಮುಖಂಡರಾದ ಮಧುಗೌಡ, ಉಪ್ಪಾರಹಳ್ಳಿ ಮಂಜುನಾಥ್​, ತಾಹೇರಾ ಕುಲ್ಸಂ, ಯಶೋಧ, ಜಯಲಕ್ಷ್ಮಮ್ಮ, ಮಮತಾರಾಣಿ, ಮಂಡಿ ಚಂದ್ರಣ್ಣ, ರಿಯಾಜ್​ ಗೌಸ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net