ಕನಕನ ಬಂಡೆ ಶೀಘ್ರವೇ ಅಭಿವೃದ್ಧಿ

SRP_30-04jpg
Published on

ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಗ್ರಾಮದ ಕಾವೇರಿ ನದಿಯಲ್ಲಿರುವ ಕನಕನ ಬಂಡೆಯನ್ನು ಶೀಘ್ರವೇ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಲು ರಾಜ್ಯ ಸರ್ಕಾರ ಶೀಘ್ರ ಕ್ರಮವಹಿಸಲಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.


ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಾಸ ಶ್ರೇಷ್ಠ ಶ್ರೀ ಕನಕದಾಸರ 524ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪುಷ್ಪನಮನ ಅರ್ಪಿಸಿ ಮಾತನಾಡಿದರು.


ಸಮಾಜದ ಅಂಕುಡೊಂಕುಗಳನ್ನು ತಮ್ಮ ಸಂಕೀರ್ತನೆಗಳ ಮೂಲಕವೇ ಹಾಡಿ ತಿದ್ದುವ ಜತೆಗೆ ಕೃಷ್ಣನನ್ನೇ ಒಲೈಸಿಕೊಂಡ ದಾಸ ಶ್ರೇಷ್ಠ ಕನಕದಾಸರು. ಕಾಗಿನೆಲೆಯ ಆದಿಕೇಶವನ ಆರಾಧಕರಾದ ಅವರು ಸಮಾಜದ ಜಾತಿ ವರ್ಗ, ಧರ್ಮಗಳ ಏರಿಳಿತವನ್ನು ನಿವಾರಿಸಿ ಸರ್ವರೂ ಸಮಾನರು ಎಂದು ಸಾರಿದ ಅವರು ಸಾಕ್ಷರತೆಯ ಹರಿಕಾರ. ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣಕ್ಕೆ ಅವರು ಆಗಮಿಸಿದ್ದ ಕುರುಹುವಾಗಿ ತಾಲೂಕಿನ ಮಹದೇವಪುರ ಗ್ರಾಮದ ಕಾವೇರಿ ನದಿಯ ಮಧ್ಯೆ ಅವರು ಕುಳಿತು ಧ್ಯಾನ ಮಾಡಿದ ಬಂಡೆಯನ್ನು ಕನಕನ ಬಂಡೆಯಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಶೀಘ್ರವೇ ಆದ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದರು.


ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಹೆಸರಿನಲ್ಲಿ ಮಾತ್ರ ಕನಕರಾಗದೆ ಬಡಜನರ ಬದುಕು ಸುಧಾರಿಸುವ ಸುವರ್ಣ ಸಂತರಾದರು. ಕನಕದಾಸರ ಬದುಕು ಎಲ್ಲ ಸಮುದಾಯದ ಜನರಿಗೆ ಸರ್ವಕಾಲಕ್ಕೂ ಆದರ್ಶನೀಯ ಎಂದರು.


ತಾಲೂಕು ಪಂಚಾಯಿತಿ ಇಒ ವೇಣು, ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು ಸೇರಿದಂತೆ ಕುರುಬ ಸಮುದಾಯ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net