

ರಾಮನಗರ ಸಂತಶ್ರೇಷ್ಠ ಕನಕದಾಸರ ಜಯಂತಿ ಆಚರಣೆಗೆ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಚನ್ನಪಟ್ಟಣ ಉಪಚುನಾವಣೆ ನೀತಿ ಸಂಹಿತೆ ನೆಪ ಹೇಳಿ ಸಮಾಜದ ಮುಖಂಡರಿಗೆ ಆಹ್ವಾನಿಸಿಲ್ಲ. ಹೆಸರಿಗಷ್ಟೇ ಜಯಂತಿ ಆಚರಣೆ ಮಾಡಿದ್ದಾರೆ ಎಂದು ರಾಮನಗರ ತಾಲೂಕು ಕುರುಬರ ಸಂಘದ ಅಧ್ಯಕ್ಷ ಆರ್. ರೇಣುಕಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕುಂಭಾಪುರದ ರಾಮನಗರ ತಾಲೂಕು ಕುರುಬರ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.
ಪ್ರತಿ ವರ್ಷ ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಡಳಿತ ಪೂರ್ವ ಭಾವಿ ಸಭೆಯನ್ನು ಆಯೋಜಿಸಿ, ಸಮುದಾಯದ ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿತ್ತು. ಆದರೆ, ಈ ಬಾರಿ ನೀತಿ ಸಂಹಿತೆ ಹೇಳಿ ಪೂರ್ವಭಾವಿ ಸಭೆ ಕರೆದಿಲ್ಲ. ಕಾರ್ಯಕ್ರಮ ಕೇವಲ ಇಲಾಖಾ ವ್ಯಾಪ್ತಿಗೆ ಸೀಮಿತಗೊಳಿಸಿದೆ. ನೀತಿ ಸಂಹಿತೆ ಇದ್ದರೂ ಸರಳ ಆಚರಣೆಗೆ ಯಾವುದೇ ಅಡೆತಡೆ ಇಲ್ಲ. ರಾಜಕೀಯ ನಾಯಕರಿಗೆ ಆಹ್ವಾನ ನೀಡದೇ ಸಮಾಜದ ಮುಖಂಡರು, ಕನಕದಾಸರನ್ನು ಆರಾಧಿಸುವವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಬಹುದಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕನಕದಾಸರ ಜಯಂತಿ ಆಚರಣೆ ನಾಲ್ಕು ಗೋಡೆಗಳಿಗೆ ಹಾಗೂ ನಾಲ್ಕೈದು ಜನಕ್ಕೆ ಸೀಮಿತವಾಗಿ ನಡೆದಿರುವುದು ದುರ್ದೈವ ಎಂದು ಬೇಸರ ವ್ಯಕ್ತ ಪಡಿಸಿದರು.
ಸಮಾಜದಲ್ಲಿದ್ದ ಹಲವು ಲೋಪದೋಷ ನಿವಾರಿಸಿ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ, ಸಮಾನತೆಯ ತತ್ವವನ್ನು ಜನರಿಗೆ ಸಾರಿ ಜನರಲ್ಲಿ ಜಾಗೃತಿ ಮೂಡಿಸಿದವರು ಭಕ್ತ ಕನಕದಾಸರು. ಇಂತಹ ಮಹಾನ್ ಭಕ್ತ ಕನಕದಾಸರ ಜಯಂತಿಗೆ ಸರ್ಕಾರಿ ರಜೆ ಮಂಜೂರಾಗಿದೆ. ಆದರೆ, ಅಧಿಕಾರಿಗಳು ಜಯಂತಿಗಳಲ್ಲಿ ಭಾಗವಹಿಸುತ್ತಿಲ್ಲ. ಆಚರಿಸಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯಾ ಜಾತಿಗೆ ಸೀಮಿತವಾದಂತೆ ಕಾರ್ಯಕ್ರಮ ನಡೆಸುತ್ತಾ ಬರುತ್ತಿದೆ. ಇದು ತಪ್ಪಬೇಕು. ಇಂತಹ ಮಹಾನ್ ವ್ಯಕ್ತಿಗಳ ಸಾರ ಎಲ್ಲರಿಗೂ ಪಸರಿಸುವ ಕೆಲಸ ಇಲಾಖೆ ಅಧಿಕಾರಿಗಳು ಮಾಡಬೇಕಿದೆ ಎಂದರು.
ರಾಮನಗರ ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಹರಳಪ್ಪ, ಗೌರಾವಾಧ್ಯಕ್ಷ ಸಿದ್ದಯ್ಯ, ಖಜಾಂಚಿ ಉಮೇಶ್, ಉಪಾಧ್ಯಕ್ಷ ಸಿದ್ದೇಗೌಡ, ಸಹ ಕಾರ್ಯದರ್ಶಿ ವೆಂಕಟೇಶ್, ಸಂಘದ ಮುಖಂಡರಾದ ಬಸವರಾಜು, ಪುಟ್ಟರಾಜು, ರಾಮಕೃಷ್ಣಯ್ಯ, ರುದ್ರಯ್ಯ, ಸಿ. ರಾಜು, ಮಂಜು, ಸಿ. ಕೆಂಪಣ್ಣ, ನಾಗ ಸಂದೀಪ್, ಶಿವಬೀರಯ್ಯ, ಪಾಪಣ್ಣ, ನಂಜುಂಡಯ್ಯ ಇದ್ದರು.
ಸರಳ ಆಚರಣೆಗೆ ಆಹ್ವಾನ ನೀಡದ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಸತೀಶ್ ಅವರನ್ನು ನಮ್ಮ ಮುಖಂಡರು ಪ್ರಶ್ನಿಸಿದರೆ ನಮಗೆ ಜಯಂತಿ ಆಚರಿಸಲು ಸರ್ಕಾರ ಕೇವಲ ಮೂರು ಸಾವಿರ ಮಾತ್ರ ನೀಡಿದೆ ಎಂಬ ಲಘು ಉತ್ತರ ನೀಡುತ್ತಾರೆ. ಕನಕಜಯಂತಿ ಆಚರಣೆ ಮಾಡಲು ಸಮುದಾಯದ ಮುಖಂಡರಿಗೆ ಹಣ ಕೇಳಿದ್ದರೆ ಇಡೀ ಕಾರ್ಯಕ್ರಮದ ವೆಚ್ಚವನ್ನು ಸಮಾಜವೇ ಭರಿಸುತ್ತಿತ್ತು ಇದು ಜಿಲ್ಲಾಡಳಿತದ ಬೇಜವಾಬ್ದಾರಿ ತೋರುತ್ತದೆ. ಆರ್. ರೇಣುಕಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ.