

ಕೈಲಾಂಚ : ನಾನು ಎಂಬ ಅಹಂ ಬಿಟ್ಟಾಗಷ್ಟೇ ಮನುಷ್ಯ ಸಮಾಜದಲ್ಲಿ ಸಂಘಟಿತವಾಗಿ, ಮುಖಂಡನಾಗಿ ಜನರಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ವೈದ್ಯ ಡಾ. ಭರತ್ ಕೆಂಪಣ್ಣ ತಿಳಿಸಿದರು.
ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಿದ್ದ ಶನಿಪ್ರಭಾವ ಅಥವಾ ರಾಜಾ ಸತ್ಯವ್ರತ ನಾಟಕದಲ್ಲಿ ಭಾಗವಹಿಸಿ ಮಾತನಾಡಿದರು.
ಜನರ ವೈಯಕ್ತಿಕ ಬದುಕಿಗೆ ಕೊಡುವ ಪ್ರಾಮುಖ್ಯತೆಯನ್ನು ಸಮಾಜಮುಖಿ ಕಾರ್ಯಗಳಿಗೆ ನೀಡಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಅಭಿನಯಿಸುವ ನಾಟಕಗಳು ನಮ್ಮ ಭಾರತೀಯ ಸಂಸ್ಕೃತಿಯ ಕಣಜಗಳಾಗಿವೆ. ಮನುಷ್ಯನಿಗೆ ಮಾನವೀಯ ಮೌಲ್ಯಗಳನ್ನು ತಿಳಿಸುವ ನಾಟಕಗಳು ಉತ್ತಮ ಕಥಾ ಹಂದರವನ್ನು ಹೊಂದಿವೆ. ನಾಟಕಗಳು ಕೇವಲ ಅಭಿನಯಕ್ಕಷ್ಟೇ ಸೀಮಿತಗೊಳ್ಳದೆ ಗ್ರಾಮದಲ್ಲಿ ಒಗ್ಗಟ್ಟು ಸಾಮರಸ್ಯ ಮೂಡಿಸುತ್ತವೆ. ಇಂತಹ ಕಲೆಗಳು ಹೆಚ್ಚು ಅಭಿನಯಗೊಂಡಾಗ ಗ್ರಾಮದಲ್ಲಿ ಸಾಮರಸ್ಯದ ಕೊರತೆ ಉಂಟಾಗಲಾರದು ಎಂದು ತಿಳಿಸಿದರು.
ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಭಿನಯಿಸುವ ನಾಟಕ ಕಲೆಗಳು ಹೆಚ್ಚೆಚ್ಚು ಪ್ರದರ್ಶನಗೊಂಡಾಗ ಸಮಾಜದಲ್ಲಿ ಮತ್ತಷ್ಟು ಒಗ್ಗೂಡುವಿಕೆ ಸಾಧ್ಯ. ರಂಗ ಕಲೆಗಳು ಉತ್ತಮ ಮಾಹಿತಿಯನ್ನು ಒಳಗೊಂಡಿದ್ದು, ಜನರ ಜೀವನದಲ್ಲಿ ಬಹಳ ಮನರಂಜನೆಯನ್ನು ನೀಡುತ್ತಾ ಕ್ರೌರ್ಯ, ಅನ್ಯಾಯ, ಸತ್ಯ, ಧರ್ಮದ ಬಗ್ಗೆ ಉತ್ತಮ ರೀತಿಯಲ್ಲಿ ನಾಟಕವನ್ನು ಕಟ್ಟಿ ತೋರಿಸಿ, ಜನರನ್ನು ಸರಿದಾರಿಗೆತರಲು ಪ್ರಯತ್ನಿಸಿರುವುದನ್ನು ನಾವು ನಾಟಕಗಳಿಂದ ಕಾಣಬಹುದಾಗಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಎಸ್.ಜಗದೀಶ್, ವಿಭೂತಿಕೆರೆ ವಿಎಸ್‌ಎಸ್‌ಎನ್ ಅಧ್ಯಕ್ಷ ಅಂಜನಾಪುರ ವಾಸು, ಕೈಲಾಂಚ ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರಂಗ ಮಾತನಾಡಿದರು. ನಿವೃತ್ತ ಸೈನಿಕ ಶಿವಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಸುನೀತಾ ನಾಗರಾಜ್‌ಸಿಂಗ್ ಬಾಬು, ಸದಸ್ಯರಾದ ಮಹದೇಶಸ್ವಾಮಿ, ಲೀಲಾವತಿ ಶಿವರಾಜು, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಉಪಾಧ್ಯಕ್ಷ ಪಿ. ನಾಗರಾಜು, ನಿರ್ದೇಶಕರಾದ ಶಿವಲಿಂಗಪ್ರಸಾದ್, ಅಡಿಗೆ ರಾಜಣ್ಣ, ಮುಖಂಡರಾದ ಚಲುವೇಗೌಡ, ಮರಿಮಾದಯ್ಯ, ಬಸವರಾಜು, ಸಿದ್ದಾಚಾರ್, ಮರಿಸ್ವಾಮಯ್ಯ, ಗುರುಲಿಂಗಯ್ಯ, ಮೈಕ್ ನಾಗರಾಜು, ಬಸವಣ್ಣ, ಧನಂಜಯ ಇದ್ದರು.