

ಕಂಪ್ಲಿ: ನರ್ಸರಿಯಿಂದ ಪಡೆದ ಮೆಣಸಿನಕಾಯಿ ಸಸಿಗಳು ನಾಟಿ ನಂತರ ಸಮರ್ಪಕ ಬೆಳವಣಿಗೆಯಾಗದ ಹಿನ್ನೆಲೆಯಲ್ಲಿ, ಮುನಿರಾಬಾದಿನ ತೋಟಗಾರಿಕೆ ವಿದ್ಯಾಲಯದ ತಜ್ಞರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬುಧವಾರ ಮೆಟ್ರಿಯ ನರ್ಸರಿ ಹಾಗೂ ಮೆಣಸಿನಕಾಯಿ ಸಸಿ ನಾಟಿ ಮಾಡಿದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.
ನರ್ಸರಿಯಿಂದ ಪಡೆದ ಸಸಿಗಳು ಜಮೀನಿನಲ್ಲಿ ನಾಟಿ ಮಾಡಿದ ಕೆಲ ದಿನಗಳಲ್ಲೇ ಒಣಗಿವೆ. ಇದಕ್ಕೆ ನರ್ಸರಿ ದೋಷವೇ ಕಾರಣ. ಇದರಿಂದ ನಮಗೆ ಆರ್ಥಿಕ ನಷ್ಟವಾಗಿದೆ ಎಂದು ರೈತರಾದ ತಳವಾರ ವೀರೇಶ್, ನಾಯಕರ ಅಂಜಿನಪ್ಪ, ಯೋಗಪ್ಪ, ಮೇಗಳಮನೆ ಈಶ್ವರಪ್ಪ, ಉಚ್ಚಿಲಕುಂಠೆ ಈರಪ್ಪ, ಕಿಸ್ತಿ ಸೋಮಪ್ಪ ಮೊದಲಾದವರು ತಜ್ಞರ ಬಳಿ ದೂರಿದರು.
ಇದ್ನನೂ ಓದಿ: ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಆಗ್ರಹ
ಮೆಟ್ರಿ ಗ್ರಾಮದ ಸರ್ವೇ ನಂಬರ್ 213ಎ ನಲ್ಲಿ ಬೆಳೆದ ಮೆಣಸಿನಕಾಯಿ ತೋಟ ಹಾಗೂ ನರ್ಸರಿ ಪರಿಶೀಲಿಸಿದ ತಜ್ಞರ ತಂಡ, ಮೆಣಸಿನಕಾಯಿ ಬೆಳೆ ವೀಕ್ಷಿಸಲಾಗಿ ರೋಗಲಕ್ಷಣದಿಂದ ಬೆಳವಣಿಗೆ ಕುಂಠಿತಗೊಂಡಿದೆ. ಸೀಲಿಂದ್ರ ರೋಗಾಣುವಿನಿಂದ ಬೇರು ಕೊಳೆಯಲಾರಂಭಿಸಿ ಫಸಲಿನ ಬೆಳವಣಿಗೆಯಾಗಿಲ್ಲ. ಸಸಿಗಳ ಮಾದರಿ ಹಾಗೂ ರೈತರ ಅಭಿಪ್ರಾಯ ಸಂಗ್ರಹಿಸಿದೆ. ಹವಾಮಾನ ಇಲಾಖೆಯಿಂದ ಮಳೆ, ಹವಾಮಾನ ವರದಿ ಪಡೆದುಕೊಂಡು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲಾಗುವುದು ಎಂದರು.
ನರ್ಸರಿಯ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ನರ್ಸರಿಯಲ್ಲಿ ಉಪಯೋಗಿಸುವ ಕೊಕೋಪಿಟ್, ನಿರ್ವಹಣಾ ಕ್ರಮಗಳನ್ನು ಪಡೆದುಕೊಳ್ಳಲಾಗಿದೆ. ರೈತರು ಸಸಿಗಳನ್ನು ಪಡೆದ ದಿನಾಂಕ ಸಂಗ್ರಹಿಸಿದೆ. ಇದೇ ನರ್ಸರಿಯಿಂದ ಬೇರೆ ರೈತರು ಸಸಿ ಪಡೆದು ನಾಟಿ ಮಾಡಿದ ತೋಟಗಳನ್ನು ಪರೀಶೀಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರೈತರಿಗೆ ಸಲಹೆಯಾಗಿ ಬೇರುಕೊಳೆ ರೋಗ ನಿಯಂತ್ರಣಕ್ಕೆ ಜೈವಿಕ ಪೀಡೆನಾಶಕ ಸಿಂಪಡಿಸಬೇಕಿದೆ. ಪ್ರತಿ ಎಕರೆಗೆ 3ರಿಂದ 5ಕೆಜಿ ಟ್ರೈಕೋಡರ್ಮಾವನ್ನು 100 ಕೆಜಿ ತಿಪ್ಪೆಕಸದೊಂದಿಗೆ ಮಿಶ್ರಣಮಾಡಿ ನೇರ ಮೆಣಸಿನಕಾಯಿ ಸಸಿಗಳ ಬುಡಕ್ಕೆ ಹಾಕುವಂತೆ ಸಲಹೆ ನೀಡಿದರು.
ಬೆಳೆ ಹಾಗೂ ನರ್ಸರಿ ಪರಿಶೀಲನೆ ವೇಳೆ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯರೋಗಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಆಚಾರಿ, ತರಕಾರಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ಆರ್.ಲಿಂಗಮೂರ್ತಿ, ಮಣ್ಣು ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಯೋಗಿಶಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್ ಡಿ.ಸಪ್ಪಂಡಿ, ಸಹಾಯಕ ತೋಟಗಾರಿಕೆ ನಿರ್ದೇಶಕ ವಿಜಯ್ ನಿಚ್ಚಾಪುರ, ತಾಲೂಕು ತೋಟಗಾರಿಕೆ ಅಧಿಕಾರಿ ಆರ್.ಜೆ.ಕರಿಗೌಡರ್ ಹಾಗೂ ರೈತರು ಉಪಸ್ಥಿತರಿದ್ದರು.
ನರ್ಸರಿಯಿಂದ ರೈತರಿಗೆ ಗುಣಮಟ್ಟದ ಸಸಿಗಳನ್ನು ನೀಡಲಾಗಿದೆ. ಅವಧಿ ಮೀರಿದ ಸಸಿಗಳನ್ನು ರೈತರು ಒಯ್ದಿದ್ದಾರೆ. ರೈತರು ಸಸಿ ನಾಟಿ ಮಾಡಿದ ಸಂದರ್ಭದಲ್ಲಿ ಹವಾಮಾನ ಸರಿ ಇರಲಿಲ್ಲ. ಸಸಿ ಒಣಗಲು, ಬೆಳವಣಿಗೆ ಕುಂಠಿತವಾಗಲು ನರ್ಸರಿ ಕಾರಣವಲ್ಲ ಎಂದು ನರ್ಸರಿ ಮಾಲೀಕ ಭಾಸ್ಕರ್ ಹೇಳಿದ್ದಾರೆ.