

ಕಂಪ್ಲಿ: ಪಶುಪಾಲನಾ ಸೇವಾ ಇಲಾಖೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಮತ್ತೆ ರಸ್ತೆಗಿಳಿದಿವೆ. ಅವುಗಳ ಮೇಲೆ ಹಿಂದಿನ ಸಿಎಂ ಬಸವರಾಜ ಎಸ್.ಬೊಮ್ಮಾಯಿ, ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಅವರ ಭಾವಚಿತ್ರಗಳಿದ್ದು, ತೆರವು ಮಾಡಿಲ್ಲ. ಅದೇ ವಾಹನದ ಮೂಲಕ ಗ್ರಾಮೀಣ ಭಾಗಕ್ಕೆ ತೆರಳಿ ಯೋಜನೆ ಕುರಿತು ಪ್ರಚಾರ ಆರಂಭಿಸಲಾಗಿದೆ.
ಸಂಚಾರಿ ವಾಹನದ ಕಾರ್ಯವೈಖರಿ ಕುರಿತು ಇಲ್ಲಿನ ಪಶು ಆಸ್ಪತ್ರೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಕೆ.ಯು.ಬಸವರಾಜ ಪ್ರತಿಕ್ರಿಯಿಸಿ, ಸದ್ಯ ತುರ್ತು ಪಶು ಚಿಕಿತ್ಸಾ ವಾಹನ ಆರಂಭಕ್ಕೆ ಆದೇಶವಿದ್ದು ಸದ್ಯ ಚಾಲಕ ಮತ್ತು ಸಹಾಯಕ ಮಾತ್ರ ಇದ್ದಾರೆ.
ಇದನ್ನೂ ಓದಿ: ವರವಾದ ಪಶುಸಂಜೀವಿನಿ ಆಂಬುಲೆನ್ಸ್
ಇನ್ನು ಪಶು ವೈದ್ಯರು ಬಂದಿಲ್ಲ. ನ್ಯೂಸ್ಪಾರ್ಕ್ ಏಜೆನ್ಸಿಯಿಂದ ವೈದ್ಯರು ನೇಮಕಗೊಳ್ಳಬೇಕಿದೆ. ಎರಡು ದಿನಗಳಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತುರ್ತು ಪಶು ಚಿಕಿತ್ಸಾ ವಾಹನ ಮೂಲಕ ತೆರಳಿ ತುರ್ತು ಪಶು ಚಿಕಿತ್ಸೆ ಆರಂಭವಾಗುವ ಕುರಿತು ಪ್ರಚಾರ ಕೈಗೊಂಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಪಶು ವೈದ್ಯರು ಆಗಮಿಸಲಿದ್ದು ಸಂಚಾರಿ ವಾಹನ ಮೂಲಕ ಪಶುಗಳ ತುರ್ತು ಚಿಕಿತ್ಸೆಗೆ ಚಾಲನೆ ದೊರಕಲಿದೆ. ಹಿಂದಿನ ಸಿಎಂ ಮತ್ತು ಪಶು ಸಚಿವರ ಭಾವಚಿತ್ರ ಬದಲಿಸಿ ಹೊಸ ಚಿತ್ರ ಅಳವಡಿಸುವ ಕುರಿತು ಇಲಾಖೆಯಿಂದ ಆದೇಶ ಬಂದಿಲ್ಲ. ಬಂದ ನಂತರವೇ ಸಂಚಾರಿ ವಾಹನದ ಸರಿಯಾದ ಕಾರ್ಯಸೂಚನೆ ಕುರಿತು ಅಧಿಕೃತ ಮಾಹಿತಿ ದೊರಕಲಿದೆ ಎಂದರು.