More

    ವರವಾದ ಪಶುಸಂಜೀವಿನಿ ಆಂಬುಲೆನ್ಸ್

    ಮಂಗಳೂರು: ರೋಗಗ್ರಸ್ತ ಜಾನುವಾರುಗಳಿಗೆ ರೈತರ ಮನೆ ಬಾಗಿಲಲ್ಲೇ ತಜ್ಞ ಪಶುವೈದ್ಯಕೀಯ ಸೇವೆ ಸಿಗಬೇಕು ಛಿನ್ನುವ ಉದ್ದೇಶದಿಂದ ಕಳೆದ ವರ್ಷ ಆರಂಭವಾಗಿರುವ ‘ಪಶು ಸಂಜೀವಿನಿ’ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್ ಜಿಲ್ಲೆಯಲ್ಲಿ ಜಾನುವಾರುಗಳ ಪಾಲಿಗೆ ವರವಾಗಿದೆ.

    ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಜಾನುವಾರುಗಳಿಗೆ ಶಸ್ತ್ರಚಿಕಿತ್ಸೆ ಸಹಿತ ಉನ್ನತ ಮಟ್ಟದ ಚಿಕ್ಸಿತೆ ನೀಡಲಾಗಿದೆ. 2020ರ ಅಕ್ಟೋಬರ್‌ನಲ್ಲಿ ಈ ಸೇವೆಗೆ ಚಾಲನೆ ಸಿಕ್ಕಿದ್ದು, ಅಲ್ಲಿಂದ ಮಾರ್ಚ್ 2021ರ ವರೆಗೆ ಒಟ್ಟು 31 ಹಾಗೂ 2021 ಏಪ್ರಿಲ್‌ನಿಂದ ಜುಲೈವರೆಗೆ 34 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.

    ಜಾನುವಾರುಗಳ ಪ್ರಾಣಕ್ಕೆ ಅಪಾಯವಾಗುವ, ಸ್ಥಳೀಯ ಪಶುಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಸಂದರ್ಭ ಆಂಬುಲೆನ್ಸ್ ಸೇವೆ ಬಳಸಲಾಗುತ್ತದೆ. ಪ್ರಸವಕ್ಕೆ ಸಂಬಂಧಿಸಿದ ತೊಂದರೆ, ವಿಷಪ್ರಾಶನ, ಹೊಟ್ಟೆ ಉಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆ ಮುರಿತ, ಕ್ಯಾನ್ಸರ್, ಟ್ಯೂಮರ್‌ನಂತಹ ಅಪಾಯಕಾರಿ ರೋಗ ಹಾಗೂ ಸಾಧಾರಣ ಚಿಕಿತ್ಸೆಗೆ ಸ್ಪಂದಿಸದ ಸಮಯದಲ್ಲಿ ಆಂಬುಲೆನ್ಸ್‌ನಲ್ಲಿ ತೆರಳಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ವೈದ್ಯರು ಮಂಗಳೂರಿನ ಪಾಲಿಕ್ಲಿನಿಕ್ ಸಂಪರ್ಕಿಸಿ ರೋಗದ ಕುರಿತು ಮಾಹಿತಿ ನೀಡಬೇಕು. ಆಗ ಅದಕ್ಕೆ ಸಂಬಂಧಿಸಿದ ಉಪಕರಣಗಳ ಸಹಿತ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಲಿದೆ. ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗೆ ಪ್ರಾಶಸ್ತ್ಯ. ಅವುಗಳ ಪ್ರಾಣಹಾನಿ ತಪ್ಪಿಸಿ ರೈತರ ಆರ್ಥಿಕ ನಷ್ಟದಿಂದ ಪಾರು ಮಾಡುವುದು ಯೋಜನೆ ಗುರಿಯಾಗಿದೆ.

    15 ಜಿಲ್ಲೆಗಳಲ್ಲಿ ಮಾತ್ರ ಸೇವೆ: ಪಶುಸಂಜೀವಿನಿ ಆಂಬುಲೆನ್ಸ್ ಸೇವೆ ರಾಜ್ಯದ 15 ಜಿಲ್ಲೆಗಳಲ್ಲಿ ಮಾತ್ರ ಆರಂಭಿಸಲಾಗಿದೆ. ಬೀದರ್, ರಾಯಚೂರು, ಕಲಬುರಗಿ, ಧಾರವಾಡ, ವಿಜಯಪುರ, ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಪಾಲಿಕ್ಲಿನಿಕ್‌ಗಳಲ್ಲಿ ಈ ಸೌಲಭ್ಯವಿದೆ. ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ.

    ವೈದ್ಯರು, ಸಿಬ್ಬಂದಿ ಇಲ್ಲ: ಸರ್ಕಾರ ಆಂಬುಲೆನ್ಸ್ ಸೌಲಭ್ಯ ನೀಡಿದ್ದರೂ, ವೈದ್ಯರು-ಸಿಬ್ಬಂದಿಯನ್ನು ಒದಗಿಸಿಲ್ಲ. ಮುಖ್ಯವಾಗಿ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಸಹಾಯಕ ಸಿಬ್ಬಂದಿ ಅಗತ್ಯವಿದೆ. ಪ್ರಸ್ತುತ ಪಶು ಆಸ್ಪತ್ರೆಗಳ ತಜ್ಞ ವೈದ್ಯರು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ನಲ್ಲಿ ತೆರಳುತ್ತಾರೆ. ಆದ್ದರಿಂದ ಶಾಶ್ವತ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಂಗಳೂರು ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ರಾಮ್‌ಪ್ರಕಾಶ್ ಡಿ. ತಿಳಿಸಿದ್ದಾರೆ.

    ಆಂಬುಲೆನ್ಸ್‌ನಲ್ಲಿ ಏನೇನಿದೆ?: ಸುಸಜ್ಜಿತವಾದ ಆಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾಗ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕಾೃನಿಂಗ್ ಉಪಕರಣಗಳ ಅಳವಡಿಕೆಗೆ ಅವಕಾಶ. 250 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್, ಎಸಿ ವ್ಯವಸ್ಥೆ, ಪಶು ವೈದ್ಯರು, ಸಿಬ್ಬಂದಿಗೆ ಆಸನ ವ್ಯವಸ್ಥೆ, ಕೈ ತೊಳೆಯುವ ಬೇಸಿನ್, ಎಲ್‌ಇಡಿ ಲೈಟ್, ಆಮ್ಲಜನಕ ಸಪೋರ್ಟ್ ಸಿಸ್ಟಂ, ಶಸ್ತ್ರಚಿಕಿತ್ಸಾ ಉಪಕರಣಗಳು, ಮರಣೋತ್ತರ ಪರೀಕ್ಷೆ ಕಿಟ್, ಪ್ರಸೂತಿ ಕಿಟ್, ಔಷಧ ಮೊದಲಾದವುಗಳನ್ನು ಒಳಗೊಂಡಿದೆ.

    ಪಶು ಸಂಜೀವಿನಿ ಆಂಬುಲೆನ್ಸ್ ಮೂಲಕ ಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ಆಂಬುಲೆನ್ಸ್ ಎಲ್ಲ ರೀತಿಯ ಸುಸಜ್ಜಿತ ಸೌಲಭ್ಯ ಹೊಂದಿರುವುದರಿಂದ, ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಕೆಲವೆಡೆ ಶಿಬಿರ ಆಯೋಜಿಸುವಾಗಲೂ ವಾಹನ ನಿಯೋಜಿಸಲಾಗುತ್ತಿದೆ.
    ಡಾ.ರಾಮ್‌ಪ್ರಕಾಶ್ ಡಿ. ಉಪನಿರ್ದೇಶಕರು, ಪಾಲಿಕ್ಲಿನಿಕ್ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts