ಮೆಟ್ರಿ ಗ್ರಾಮಕ್ಕೆ ಬೇಕಿದೆ ಸಿಎಚ್‌ಸಿ ಸೌಲಭ್ಯ

KAMPLI Metri Gp
ಮೆಟ್ರಿ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಉಪ ಕೇಂದ್ರದ ಹೊರನೋಟ.
Published on

ಕಂಪ್ಲಿ: ರಾಜ್ಯ ಹೆದ್ದಾರಿ-29ಕ್ಕೆ ಹೊಂದಿಕೊಂಡಿರುವ ಮೆಟ್ರಿ ಗ್ರಾಪಂ ಸುತ್ತಲಿನ ಹಳ್ಳೀಗಳಲ್ಲಿ 11 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜನರ ಅನುಕೂಲಕ್ಕಾಗಿ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಗ್ರಾಮದಲ್ಲಿ ಸದ್ಯ ಆರೋಗ್ಯ ಮತ್ತು ಕ್ಷೇಮ ಉಪ ಕೇಂದ್ರವಿದೆ. ತಿಂಗಳಿಗೆ 500ಕ್ಕೂ ಹೆಚ್ಚು ರೋಗಿಗಳು ತಪಾಸಣೆ, ಕೃಷಿ ಋತುಮಾನದ ದಿನಗಳಲ್ಲಿ ಅಂದಾಜು 15 ಜನ ಹಾವು ಕಡಿತಕ್ಕೆ, ವರ್ಷಕ್ಕೆ 50 ಜನ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಮಾಸಿಕ 15 ಹೆರಿಗೆ ಆಗುತ್ತವೆ.

ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೆಟ್ರಿ ಗ್ರಾಮದಲ್ಲಿ ಸಿಎಚ್‌ಸಿ ಆರಂಭಿಸಿದರೆ ಚಿನ್ನಾಪುರ, ದೇವಲಾಪುರ, ಹಂಪಾದೇವನಹಳ್ಳಿ, ಜವುಕು, ಜೀರಿಗನೂರು, ಗೋನಾಳ್, ಹೊನ್ನಳ್ಳಿ, ಮಾವಿನಹಳ್ಳಿ ಸೇರಿ ಸುಮಾರು 20 ಗ್ರಾಮಗಳ 50 ಸಾವಿರಕ್ಕೂ ಅಧಿಕ ಜನರ ಚಿಕಿತ್ಸೆಗೆ ಆಸರೆಯಾಗಲಿದೆ.

ಮೆಟ್ರಿ ಗುಡ್ಡಗಾಡು ಪ್ರದೇಶವಾದ್ದರಿಂದ ವಿಷಜಂತು, ವನ್ಯ ಜೀವಿಗಳ ಉಪಟಳವಿದೆ. ಸಿಎಚ್‌ಸಿ ಆರಂಭದಿಂದ ತಜ್ಞ ವೈದ್ಯರು, ದಿನದ 24 ತಾಸು ಸೇವೆ ದೊರಕಲಿದ್ದು ತುರ್ತು ಚಿಕಿತ್ಸೆಗೆ ಅನುಕೂಲವಾಗುತ್ತದೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ಕಂಪ್ಲಿಗೆ ಹೋಗಬೇಕಿದ್ದು ಮಾರ್ಗ ಮಧ್ಯೆಯೇ ರೋಗಿಗಳು ಅಸುನೀಗಿದ ಉದಾಹರಣೆಗಳಿವೆ. ಆದ್ದರಿಂದ ಆರೋಗ್ಯ ಮತ್ತು ಕ್ಷೇಮ ಉಪ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಸುತ್ತಲಿನ ಗ್ರಾಮಸ್ಥರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net