

ಕಂಪ್ಲಿ: ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಜಾಗೃತಿವಹಿಸಬೇಕು ಎಂದು ಮೆಟ್ರಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ ಬಣ) ತಾಲೂಕು ಸಂಘಟನಾ ಸಂಚಾಲಕ ಎಚ್.ಕುಮಾರಸ್ವಾಮಿ ಒತ್ತಾಯಿಸಿದರು.
ಇಲ್ಲಿನ ಅತಿಥಿಗೃಹ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾದಿಗ ಸಮುದಾಯ ಮುಖಂಡರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯತೆ ನೀಡುವ ಹಿನ್ನೆಲೆಯಲ್ಲಿ ಆರ್.ಬಿ.ತಿಮ್ಮಪೂರ್‌ಗೆ ಡಿಸಿಎಂ ಸ್ಥಾನ ಕೊಡಬೇಕೆಂದು ಆಗ್ರಹಿಸಿದರು.
ಕಂಪ್ಲಿ ತಾಲೂಕು ಮಾತಂಗ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಡಿ.ಎಸ್. ಪ್ರಸಾದ್ ಮಾತನಾಡಿ, ಆರ್.ಬಿ.ತಿಮ್ಮಾಪೂರ್ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ನಿಷ್ಠೆಯಿಂದ ಶ್ರಮಿಸಿದ್ದಾರೆ. ಪಕ್ಷದಲ್ಲಿ ಕಾರ್ಯಕರ್ತರಾಗಿ, ಜವಳಿ ನಿಗಮದ ಅಧ್ಯಕ್ಷರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ನ್ಯಾಯದಡಿ ಮಾದಿಗ ಎಡಗೈ ಸಮುದಾಯಕ್ಕೆ ನ್ಯಾಯ ಒದಗಿಸಲು ಆರ್.ಬಿ. ತಿಮ್ಮಾಪೂರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಮಾದಿಗ ಸಮುದಾಯದ ಪ್ರಮುಖರಾದ ವೀರಾಂಜನೇಯಲು, ಹನುಮಂತಪ್ಪ, ಎಚ್.ಜಗದೀಶ, ಜಿ.ಯಲ್ಲಪ್ಪ, ಎಮ್ಮಿಗನೂರು ಜಡೆಪ್ಪ, ಗೋನಾಳ್ ಕೃಷ್ಣ, ಶೇಖರ್, ಶಾಂತಪ್ಪ ಪೂಜಾರ್, ಮೆಟ್ರಿ ನಾಗರಾಜ, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಆರ್.ಪಿ.ಶಶಿಕುಮಾರ್ ಇತರರಿದ್ದರು.