

ಕಂಪ್ಲಿ: ಸಮಾನತೆ ಧರ್ಮದ ಜ್ಞಾನ ಬಿತ್ತುವಲ್ಲಿ ಕಲ್ಯಾಣಕ್ರಾಂತಿ ಸಫಲವಾಯಿತು ಎಂದು ಇಲ್ಲಿನ ಸಾಹಿತ್ಯ ಸಿರಿ ಪ್ರತಿಷ್ಠಾನದ ಕಾರ್ಯದರ್ಶಿ ಈರಪ್ಪ ಸೊರಟೂರ ಹೇಳಿದರು.
ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಬುಧವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 157ನೇ ಮಹಾಮನೆ ಕಾರ್ಯಕ್ರಮದಲ್ಲಿ ಶರಣಕ್ರಾಂತಿ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. ಕಲ್ಯಾಣಕ್ರಾಂತಿಯು ಜಾತಿ, ಧರ್ಮ, ಭಾಷೆ, ಗಡಿ ಎಲ್ಲವನ್ನು ಮೀರಿ ಮನುಷ್ಯರೆಲ್ಲರೂ ಸರ್ವ ಸಮಾನರೆಂದು, ಅರಿವಿನಲ್ಲಿಯೇ ದೇವರಿದ್ದಾನೆಂದು ಪ್ರತಿಪಾದಿಸಿತು ಎಂದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ಇಂದಿನ ಯುವಜನತೆ ವಚನ ವಿಚಾರಧಾರೆ ಅರಿತು ಅಳವಡಿಸಿಕೊಂಡಲ್ಲಿ ನವ ಸಮಾಜ ನಿರ್ಮಿಸಲು ಸಾಧ್ಯವಿದೆ. ಆಸೆ, ಸ್ವಾರ್ಥ, ಹಿಂಸೆ, ಅಸತ್ಯ, ರಾಗದ್ವೇಷಗಳಿಂದ ಯುವಜನತೆ ವಿಮುಖರಾಗಬೇಕು ಎಂದರು.
ದೇವಸಮುದ್ರ ಸಹಿಪ್ರಾ ಶಾಲೆಯಿಂದ ಕಪ್ಪತ್ತಗುಡ್ಡದ ಕೇಲೂರಿನ ಶಾಲೆಗೆ ವರ್ಗಗೊಂಡ ಶಿಕ್ಷಕ ಈರಪ್ಪ ಸೊರಟೂರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ತಾಲೂಕು ವೀರಶೈವ ಸಂಘದ ಕಾರ್ಯದರ್ಶಿ ಎಚ್.ನಾಗರಾಜ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಸದಸ್ಯರಾದ ಎಸ್.ಡಿ.ಬಸವರಾಜ್, ಕೆ.ಚಂದ್ರಶೇಖರ್, ಕವಿತಾಳ ಬಸವರಾಜ್, ಎಸ್.ಶ್ಯಾಮಸುಂದರರಾವ್, ಬಡಿಗೇರ ಜಿಲಾನ್‌ಸಾಬ್, ರಾಜು ಬಿಲಂಕರ್, ಹಳ್ಳಿ ನಾಗರಾಜ, ರಂಗಪ್ಪ ಕಟ್ಟಿಮನಿ ಇತರರಿದ್ದರು.