More

    ಬಸವಣ್ಣನ ಪ್ರತಿ ಹೆಜ್ಜೆಯಲ್ಲೂ ಕ್ರಾಂತಿ: ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ

    ಶಿವಮೊಗ್ಗ: ಬಸವಣ್ಣನ ಕಲ್ಯಾಣ ಕ್ರಾಂತಿಯನ್ನು ಯಾವುದೇ ಜಾತಿ, ಧರ್ಮದ ಚೌಕಟ್ಟಿನಲ್ಲಿ ನೋಡಲು ಸಾಧ್ಯವೇ ಇಲ್ಲ ಎಂದು ಹಾಸನದ ಮುಕುಂದೂರು ಮಠದ ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.
    ನಗರದ ಬಸವ ಕೇಂದ್ರದಲ್ಲಿ ಬಸವಕೇಂದ್ರದಿಂದ 272ನೇ ಶರಣ ಸಂಗಮದಲ್ಲಿ ಕಲ್ಯಾಣಕ್ರಾಂತಿ ಸ್ಮರಣೆ ಕುರಿತು ಉಪನ್ಯಾಸ ನೀಡಿದ ಅವರು, ಯುರೋಪಿಯನ್ನರ ಕ್ರಾಂತಿಗಿಂತ ಮೊದಲು ಬಸವಣ್ಣನ ಕ್ರಾಂತಿ ಉಗಮವಾಗಿತ್ತು. ವಾಸ್ತವವಾಗಿ ಬಸವಣ್ಣನ ಜನಿಸಿದ್ದೇ ಒಂದು ಕ್ರಾಂತಿ ಆಗಿದೆ ಎಂದರು.
    ಯುರೋಪಿಯನ್, ಫ್ರಾನ್ಸ್‌ನಲ್ಲಿ ಆಡಳಿತ ಎಂಬುದು ಶ್ರೀಮಂತರ ಸ್ವತ್ತಾಗಿತ್ತು. ಅದರ ವಿರುದ್ಧವಾಗಿ ಅಲ್ಲಿ ಕ್ರಾಂತಿಗಳ ಉದಯವಾಯಿತು. ಭಾರತೀಯರು ತಮ್ಮ ವ್ಯಕ್ತಿತ್ವವನ್ನು ಮರೆತುಬಿಟ್ಟಿದ್ದಾರೆ. ಆ ಕಾರಣಕ್ಕೆ ಭಾರತದಲ್ಲಿ ಕ್ರಾಂತಿ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಗೌತಮ ಬುದ್ಧ ಹೇಳಿದ್ದರು. ಆದರೆ ಬಸವಣ್ಣ ಅದನ್ನು ಮೀರಿ ನಿಂತು ಕ್ರಾಂತಿಯ ಬೀಜ ಬಿತ್ತಿದ್ದರು. ಹೆಣ್ಣಿನ ಏಳಿಗೆಗಾಗಿ ಬಸವಣ್ಣ ದೊಡ್ಡ ಕ್ರಾಂತಿಯನ್ನೇ ನಡೆಸಿದರು ಎಂದರು.
    ಕ್ರಾಂತಿ ಎನ್ನುವುದು ಬಸವಣ್ಣನ ಪ್ರತಿ ಹೆಜ್ಜೆಯಲ್ಲೂ ಮೂಡಿದೆ. ವಚನಗಳ ಚಿಂತನೆ, ಮಾನವನ ಉನ್ನತೀಕರಣ ಇರುವ ಕಡೆ ಬಸವಣ್ಣನ ಕ್ರಾಂತಿ ಇದ್ದೇ ಇರುತ್ತದೆ ಎಂದ ಅವರು, ಮಾನವ ಧರ್ಮ ದೊಡ್ಡದೆಂದು ಹೋರಾಡಿದ್ದ ಬಸವಣ್ಣನ ನಾಡಿನಲ್ಲ್ೇ ಇಂದು ಜಾತಿಯ ಹುಚ್ಚು ಜನರನ್ನು ಆವರಿಸುತ್ತಿದೆ. ಬಸವತತ್ವಗಳ ಮೇಲೆ ಗದಾ ಪ್ರಹಾರ ನಡೆಯುತ್ತಿರುವುದು ವಿಪರ್ಯಾಸ ಎಂದರು.
    ವಚನ ಎಂಬುದು ಸತ್ಯ ದರ್ಶನ, ಮನುಷ್ಯ ಮನುಷ್ಯರ ಏಳಿಗೆಯಾಗಿದೆ. ದೇವರು ಮತ್ತು ದೆವ್ವದ ಹೆಸರಿನಲ್ಲೂ ಮನುಷ್ಯ ಮನುಷ್ಯರನ್ನು ತುಳಿಯುತ್ತಿದ್ದು ಪರಸ್ಪರ ಪ್ರೀತಿಸುವುದನ್ನು ಮರೆತಿದ್ದಾರೆ. ದೇವರಿಗೂ ಕಾಯಕ ಕಲಿಸಿದ ಲಿಂಗಾಯತ ಧರ್ಮ ದೊಡ್ಡದಾಗಿದ್ದು ಬಸವಣ್ಣನ ಧರ್ಮ ವಿಶ್ವಧರ್ಮವಾಗಿದೆ. ಕಲ್ಯಾಣ ಕ್ರಾಂತಿಯ ಜ್ಯೋತಿ ಎಂದಿಗೂ ಆರುವುದಲ್ಲ. ಅಳಿಸಿ ಹೋಗುವುದಲ್ಲ. ಪ್ರತಿಯೊಬ್ಬರ ಮನೆ ಮನದಲ್ಲಿ ಮೂಡುತ್ತಿರುವ ಜ್ಯೋತಿಯಾಗಿದೆ ಎಂದರು.
    ಸೂಡಾ ಆಯುಕ್ತ ಎಚ್.ಕೊಟ್ರೇಶ್ ಮಾತನಾಡಿ, ಅನಾದಿ ಕಾಲದಿಂದಲೂ ತತ್ವಜ್ಞಾನಿಗಳು ಬಸವ ತತ್ವಗಳನ್ನು ಬೋಧಿಸಿ ಸತ್ಯ ದರ್ಶನ ಮಾಡಿಸಿದ್ದಾರೆ. ಆದರೆ ಬದುಕಿನ ಜಂಜಾಟದಲ್ಲಿ ಬಸವತತ್ವಗಳನ್ನು ಮರೆತಿದ್ದೇವೆ ಬೇಸರ ವ್ಯಕ್ತಪಡಿಸಿದರು.
    12ನೇ ಶತಮಾನದಲ್ಲಿ ವಚನ ಸಾಹಿತ್ಯದಿಂದ ಮನುಕುಲದ ಕ್ರಾಂತಿಯೇ ಆಗಿದೆ. ಬಸವಣ್ಣನ ಕಾಲವು ಸುವರ್ಣ ಯುಗವಾಗಿತ್ತು. ನಡವಳಿಕೆಯಲ್ಲಿ ಭಗವಂತನನ್ನು ಕಾಣಬಹುದು ಎಂಬುದನ್ನು ತಿಳಿಸಿಕೊಟ್ಟರು. ಯಾವುದೇ ಕಾಯಕವನ್ನೂ ಮನಸ್ಪೋರ್ವಕವಾಗಿ ಮಾಡುವಂತೆ ಹೇಳಿದ್ದರು. ಅದರಂತೆ ನಡೆದುಕೊಳ್ಳಬೇಕಿದೆ ಎಂದರು.
    ಅಧ್ಯಕ್ಷತೆ ವಹಿಸಿ ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಮಾತನಾಡಿದರು. ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೈಗಾರಿಕೋದ್ಯಮಿ ಬಿ.ಎನ್.ಚಿದಾನಂದ್ ಉಪಸ್ಥಿತರಿದ್ದರು. ಇದೇ ವೇಳೆ ಚಿಂತನ ಕಾರ್ತಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts