ಶಿಕ್ಷಣದೊಂದಿಗೆ ಸಂಸ್ಕೃತಿ, ಪರಂಪರೆ ರಕ್ಷಿಸಿ

Kampli Burrkatha Eramma
ಕಂಪ್ಲಿ ಸಮೀಪದ ಹಳೇ ದರೋಜಿಯಲ್ಲಿ ನಾಡೋಜ ಬುರ‌್ರಕಥಾ ದರೋಜಿ ಈರಮ್ಮ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಬುರ‌್ರಕಥಾ ಶಿವಮ್ಮ ತಂಡ ಬುರ‌್ರಕಥಾ ಪ್ರಸ್ತುತಪಡಿಸಿದರು. ಪ್ರಮುಖರಾದ ದರೂರು ಶಾಂತನಗೌಡ, ಡಾ.ಅಶ್ವರಾಮು, ಚೋರನೂರು ಕೊಟ್ರಪ್ಪ, ಡಾ.ಸಿ.ಮಂಜುನಾಥ, ಸಣ್ಣ ಮಾರೆಪ್ಪ ಇತರರಿದ್ದರು.
Published on

ಕಂಪ್ಲಿ: ಅಲೆಮಾರಿ ಸಮುದಾಯದವರು ಸಂಸ್ಕೃತಿ, ಪರಂಪರೆಯ ರಕ್ಷಣೆಯೊಂದಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ದರೂರು ಶಾಂತನಗೌಡ ಹೇಳಿದರು.

ಹಳೇ ದರೋಜಿಯಲ್ಲಿ ನಾಡೋಜ ಬುರ‌್ರಕಥಾ ದರೋಜಿ ಈರಮ್ಮ ಫೌಂಡೇಷನ್, ಬಳ್ಳಾರಿ ಕರ್ನಾಟಕ ಜಾನಪದ ಪರಿಷತ್ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ನಾಡೋಜ ಬುರ‌್ರಕಥಾ ದರೋಜಿ ಈರಮ್ಮ ಅವರ 9ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದೊಂದಿಗೆ ಕಲೆ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಜಾಗ್ರತೆವಹಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ಮಾತನಾಡಿ, ಬುರ‌್ರಕಥಾ ದರೋಜಿ ಈರಮ್ಮ ಅವರಿಂದ ಜಿಲ್ಲೆಗೆ ರಾಷ್ಟ್ರಮಟ್ಟದ ಗೌರವ ಸಿಗಲು ಸಾಧ್ಯವಾಗಿದೆ. ಸರ್ಕಾರ ಭರವಸೆ ನೀಡಿದಂತೆ ತುರ್ತಾಗಿ ದರೋಜಿ ಈರಮ್ಮ ಅವರ ಸ್ಮಾರಕವನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಬದ್ಧತೆ ತೋರಬೇಕು ಎಂದು ಒತ್ತಾಯಿಸಿದರು.

ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್, ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಸಿ.ಮಂಜುನಾಥ, ಬುರ‌್ರಕಥಾ ದರೋಜಿ ಈರಮ್ಮ ಫೌಂಡೇಷನ್ ಅಧ್ಯಕ್ಷ ಡಾ.ಅಶ್ವರಾಮು, ಬುಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ ಸಣ್ಣ ಮಾರೆಪ್ಪ, ಪ್ರಮುಖರಾದ ಎಚ್.ಪಿ.ಶಿಕಾರಿ ರಾಮು, ಆರ್.ರಾಮಪ್ಪ ಮಾತನಾಡಿದರು. ಕಲಾವಿದರಾದ ಎಚ್.ತಿಪ್ಪೇಸ್ವಾಮಿ, ಕೆ.ಜಗದೀಶ್, ಡಾ.ಅಣ್ಣಾಜಿ ಕೃಷ್ಣಾರೆಡ್ಡಿ, ಉಪ್ಪಾರ ಹನುಮೇಶ ಇದ್ದರು. ಬುರ‌್ರಕಥಾ ಶಿವಮ್ಮ ತಂಡದಿಂದ ಬುರ‌್ರಕಥಾ ಕಥಾ, ಅಶ್ವ ರಾಮಣ್ಣ ತಂಡದಿಂದ ಜಾನಪದ ಗೀತ ಗಾಯನ, ರಾಘವೇಂದ್ರ ಮೌನೇಶ್ ತತ್ವಪದಗಳ ಗಾಯನ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net