ನಿಜ ಕಲ್ಯಾಣ ಕರ್ನಾಟಕ ಆಗಲು ಬೇಕು ಮುಖ್ಯಮಂತ್ರಿಗಳ ಕಾಳಜಿ

FB_IMG_1691212699230
Published on


ಬಾಬುರಾವ ಯಡ್ರಾಮಿ
ಕಲ್ಯಾಣ ಕರ್ನಾಟಕದ ನೈಜ ಕಲ್ಯಾಣ ಕನಸಾಗಿಯೇ ಉಳಿದಿದೆ. ಹಲವು ಸರ್ಕಾರಗಳು ಬಂದು ಹೋದರೂ ಹಿಂದುಳಿದ ಈ ಭಾಗ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಸರ್ಕಾರದಲ್ಲಿರುವವರು ಕೊಟ್ಟ ಭರವಸೆ, ಮಾಡಿರುವ ವಾಗ್ದಾನಗಳಿಗೆ ಕಮ್ಮಿಯೇನಿಲ್ಲ. ರಾಜಕೀಯ ಇಚ್ಛಾಶಕಿ ಕೊರತೆಗೆ ಈ ಭಾಗ ಇಂದಿಗೂ ಸಮಸ್ಯೆಗಳ ಸುಳಿಗಳಿಂದ ಹೊರಬಂದಿಲ್ಲ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕವಾಗಿ ಹಿಂದುಳಿದಿದೆ. ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯದಲ್ಲೂ ತೀರ ಹಿಂದೆ ಬಿದ್ದಿದೆ. ಡಾ.ನಂಜುAಡಪ್ಪ ಸಮಿತಿ ವರದಿ ಶಿಫಾರಸುಗಳಂತೆ ಸಿಗಬೇಕಾದ ಸಹಾಯ, ಸವಲತ್ತು ದೊರಕಿಲ್ಲ. ಸಂವಿಧಾನದ ಕಲಂ ೩೭೧(ಜೆ) ಪ್ರಕಾರ ವಿಶೇಷ ಸ್ಥಾನಮಾನ ಸಿಕ್ಕು ದಶಕವಾಗುತ್ತಿದ್ದರೂ ಪರಿಣಾಮಕಾರಿ ಅನುಷ್ಠಾನವಾಗಿಲ್ಲ. ನಿರೀಕ್ಷಿತ ಪ್ರಯೋಜನ ಸಿಕ್ಕಿಲ್ಲ. ಹೈದರಾಬಾದ್ ಕರ್ನಾಟಕ ಹೆಸರು ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಐದು ವರ್ಷವಾಗುತ್ತಿದೆ. ಹೆಸರು ಬದಲಿಸಿದರಷ್ಟೇ ಏನು ಫಾಯಿದಾ? ನಿಜವಾದ ಕಲ್ಯಾಣ ಯಾವಾಗ ಎಂಬುದು ಸ್ಥಳೀಯರ ಪ್ರಶ್ನೆ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಗೆ ಶನಿವಾರ ಮೊದಲ ಭೇಟಿ ನೀಡುತ್ತಿದ್ದಾರೆ. ಈ ಭಾಗದ ಜನರ ಕೆಲ ಪ್ರಮುಖ ಅಹವಾಲುಗಳನ್ನು ವಿಜಯವಾಣಿ ಅವರ ಮುಂದಿಡುವ ಪ್ರಯತ್ನ ಮಾಡಿದೆ.


ಕೆಕೆಆರ್‌ಡಿಬಿಗೆ ಬಲ ತುಂಬಬೇಕಿದೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಒದಗಿಸಿದ ೫ ಸಾವಿರ ಕೋಟಿ ಅನುದಾನ ಸಂಪೂರ್ಣ ಬಿಡುಗಡೆ ಮಾಡಿ ಕಾಲಮಿತಿ ಯೋಜನೆ ಹಾಕಿಕೊಂಡು ಪ್ರಗತಿಗೆ ಹೊಸ ಆಯಾಮ ನೀಡಬೇಕು. ಮಂಡಳಿ ಕೆಲಸಗಳಿಗೆ ವೇಗ ನೀಡಲು ತುರ್ತಾಗಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನೇಮಿಸಬೇಕು. ದೊಡ್ಡ ಮೊತ್ತದ ಕಾಮಗಾರಿಗಳ ಕಾರ್ಯಾನುಷ್ಠಾನಕ್ಕೆ ಕೆಕೆಆರ್‌ಡಿಬಿ ವಿವಿಧ ಇಲಾಖೆ ಹಾಗೂ ಏಜೆನ್ಸಿಗಳನ್ನೇ ನೆಚ್ಚಿದೆೆ. ಹೀಗಾಗಿ ಇದಕ್ಕೆ ಪ್ರತ್ಯೇಕ ಇಂಜಿನಿಯರಿAಗ್ ವಿಭಾಗ ಸ್ಥಾಪನೆ ಅಗತ್ಯವಿದೆ. ಪ್ರತಿವರ್ಷ ಕಡ್ಡಾಯ ೫ ಸಾವಿರ ಕೋಟಿ ರೂ. ಒದಗಿಸಿ ಮಂಡಳಿಗೆ ಬಲ ತುಂಬಬೇಕು.

೩೭೧ ಅನುಷ್ಠಾನಕ್ಕಿರಲಿ ಪ್ರತ್ಯೇಕ ಸಚಿವಾಲಯ
ಈ ಭಾಗದ ಹಿಂದುಳಿಯುವಿಕೆ ಹೋಗಲಾಡಿಸಲು ಸಂವಿಧಾನದ ಕಲಂ ೩೭೧(ಜೆ) ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೆ ೧೦ ವರ್ಷವಾಗುತ್ತಿದ್ದರೂ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ೩೭೧(ಜೆ) ಅನುಷ್ಠಾನ ಇತರ ಕೆಲಸ-ಕಾರ್ಯಗಳಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂಬ ಬೇಡಿಕೆಗೆ ಸರ್ಕಾರ ಈವರೆಗೂ ಸ್ಪಂದಿಸಿಲ್ಲ. ಹೀಗಾಗಿ ಸಂವಿಧಾನಬದ್ಧವಾಗಿ ನೀಡಿರುವ ಅವಕಾಶಗಳ ಲಾಭದಿಂದಲೂ ಸ್ಥಳೀಯರು ವಂಚಿತರಾಗುತ್ತಿದ್ದಾರೆ. ಪ್ರತ್ಯೇಕ ಸಚಿವಾಲಯ ಸ್ಥಾಪನೆ ಬಗ್ಗೆ ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಡಿದ ಘೋಷಣೆ ಕಾರ್ಯರೂಪಕ್ಕೆ ಬಂದಿಲ್ಲ. ಹೋರಾಟ ನಡೆದರೂ ಆಳುವ ವರ್ಗ ಗಮನಹರಿಸಿಲ್ಲ. ೩೭೧(ಜೆ) ಅಡಿ ನೇಮಕ, ಮುಂಬಡ್ತಿ, ಶೈಕ್ಷಣಿಕ ಮೀಸಲಾತಿ ಮೊದಲಾದ ಕೆಲಸಕ್ಕಾಗಿ ಸಮಸ್ಯೆ ಎದುರಾದರೆ ಪರಿಹರಿಸಲು ಸಚಿವಾಲಯ ಕಲಬುರಗಿಯಲ್ಲಿ ಸ್ಥಾಪನೆಯಾಗುವ ಅಗತ್ಯವಿದೆ. ಇದರಿಂದ ಕೆಕೆಆರ್‌ಡಿಬಿ ಕೆಲಸಗಳ ಮೇಲೆ ನಿಗಾ ಇಡಲು ಪೂರಕವೂ ಆಗಲಿದೆ.


ತೊಗರಿಗೆ ಜಿಐ ಬ್ರಾö್ಯಂಡ್
ಭೀಮಾ ಪಲ್ಸ್ ನನೆಗುದಿಗೆ

ಕಲಬುರಗಿ ಜಿಲ್ಲೆ ತೊಗರಿ ಕಣಜ. ರಾಜ್ಯದ ಶೇ.೭೦ ಪೂರೈಕೆಯ ತೊಗರಿ ಇಲ್ಲಿ ಉತ್ಪನ್ನವಾಗುತ್ತದೆ. ವಿಶೇಷ ಗುಣ, ಸ್ವಾದ ಮತ್ತು ಹೆಚ್ಚು ಪ್ರೋಟೀನ್ ಹೊಂದಿದ ಈ ನೆಲದ ತೊಗರಿಗೆ ವಿಶ್ವವ್ಯಾಪಿ ಬೇಡಿಕೆ ಇದೆ. ಜಿಐ ಟ್ಯಾಗ್ ಮಾನ್ಯತೆ ಲಭಿಸಿದೆ. ದೇಶ ಸೇರಿ ವಿಶ್ವದೆಲ್ಲೆಡೆ ಬ್ರಾÈಂಡ್ ಮಾಡಿ ಮಾರಾಟ ಮಾಡಲು ಹಿಂದಿನ ಸರ್ಕಾರ ಭೀಮಾ ಪಲ್ಸ್ ಹೆಸರಿನಲ್ಲಿ ಜಿಐ ಟ್ಯಾಗ್ ತೊಗರಿ ಬೇಳೆ ಬ್ರಾÈಂಡ್ ಅಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಿತ್ತು. ಪ್ರಾಥಮಿಕ ಹಂತದ ಕೆಲಸ ಶುರುವಾದ ಬಳಿಕ ನನೆಗುದಿಗೆ ಬಿದ್ದಿದೆ. ಹೀಗಾಗಿ ತೊಗರಿ ಮಂಡಳಿ ಮೂಲಕ ಭೀಮಾ ಪಲ್ಸ್ ಬ್ರಾÈಂಡ್ ಬೇಳೆ ಉತ್ಪಾದನೆ ಆರಂಭಿಸಲು ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳಬೇಕಿದೆ. ಆಗಲೇ ಜಿಐ ಟ್ಯಾಗ್ ಮಾನ್ಯತೆ ಪಡೆದ ತೊಗರಿಯನ್ನು ಎಲ್ಲೆಡೆ ಮಾರುಕಟ್ಟೆಗೆ ರವಾನಿಸಲು ಸಾಧ್ಯವಾಗಲಿದೆ. ತೊಗರಿ ಮಂಡಳಿಗೆ ಕರ್ನಾಟಕ ದ್ವಿದಳ ಧಾನ್ಯ, ಬೇಳೆಕಾಳು ಅಭಿವೃದ್ಧಿ ಮಂಡಳಿ ಎಂದು ಮರು ನಾಮಕರಣ ಮಾಡಲಾಗಿದೆ. ಇದಕ್ಕೆ ಆರ್ಥಿಕ ಶಕ್ತಿ ತುಂಬಿ ಸದೃಢಗೊಳಿಸುವ ಮೂಲಕ ಮಂಡಳಿ ಕಾರ್ಯಚಟುವಟಿಕೆ ರಾಜ್ಯಾದ್ಯಂತ ವಿಸ್ತರಿಸುವ ಅಗತ್ಯವಿದೆ. ಇದಕ್ಕಾಗಿ ಸರ್ಕಾರ ಮಂಡಳಿಗೆ ಆರ್ಥಿಕ ನೆರವು ಹೆಚ್ಚಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net