

ಕೊಪ್ಪಳ: ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಗೆಲುವು ದಾಖಲಿಸಲು ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಕೆಆರ್ ಪಿಪಿಯ ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಹೇಳಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಬುದ್ಧ-ಬಸವ-ಅಂಬೇಡ್ಕರ್ ತತ್ವಗಳು ನಮ್ಮ ಪಕ್ಷದ ಸಿದ್ಧಾಂತ. ಪಕ್ಷ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಪರಿಚಿತರಾಗಿದ್ದೇವೆ ಎಂದರು.
ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಹುಸಿ ಭರವಸೆ ನೀಡಿ ಕಲ್ಯಾಣ ಕರ್ನಾಟಕ ಭಾಗದ ಜನರನ್ನು ಮೋಸಗೊಳಿಸಿವೆ. 371(ಜೆ) ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದರು.
ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ಯುವ ಘಟಕ ರಾಜ್ಯಪ್ರಧಾನ ಕಾರ್ಯದರ್ಶಿ ರಾಜೇಶ ರೆಡ್ಡಿ, ಮಹಿಳಾ ಅಧ್ಯಕ್ಷೆ ರಾಜೇಶ್ವರಿ ಇತರರಿದ್ದರು.