ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಸದ್ಯದಲ್ಲೇ ನಡೆಯಲಿದೆ ಮೇಜರ್​ ಸರ್ಜರಿ!

Vidhanasoudha (1)
Published on

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ಸದ್ಯ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸರ್ಕಾರ ರಚನೆಯಾದ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿಯೂ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ.

ರಾಜಕೀಯ ಪಕ್ಷಗಳನ್ನು ನೆಚ್ಚಿಕೊಂಡು ಕಳೆದ ಎರಡ್ಮೂರು ವರ್ಷಗಳಿಂದ ಆಯಕಟ್ಟಿನ ಹುದ್ದೆಗಳಲ್ಲಿ ತಳವೂಳಿರುವ ಹಿರಿಯ-ಕಿರಿಯ ಅಧಿಕಾರಿಗಳ ಎತ್ತಂಗಡಿ ನಡೆಯಲಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನೇಕ ಬಾರಿ ಕೆಲ ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನು ಎದರು ಹಾಕಿಕೊಂಡಿದ್ದ ಪ್ರಸಂಗಗಳು ನಡೆದಿವೆ.

ನೀನು ಯಾವ ಪಕ್ಷಕ್ಕಾಗಿ ಕೆಲಸ ಮಾಡ್ತೀಯಾ ಗೊತ್ತಿದೆ

ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಾಗ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಹಲವು ಬಾರಿ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದರು.

’ನೀನು ಯಾವ ಪಕ್ಷಕ್ಕಾಗಿ ಕೆಲಸ ಮಾಡ್ತೀಯಾ ಎಂದು ಗೊತ್ತಿದೆ’ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಕೆಲ ಅಧಿಕಾರಿಗಳು ಸದ್ಯ ಉನ್ನತ ಹುದ್ದೆಯಲ್ಲಿದ್ದು ಅವರುಗಳ ವರ್ಗಾವಣೆಯ ಸಾಧ್ಯತೆ ದಟ್ಟವಾಗಿದೆ.

ಉನ್ನತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳ ಜತೆಗೆ ಕೆಳ ಹಂತದ ಅಧಿಕಾರಿಗಳಿಗೂ ವರ್ಗಾವಣೆಯ ಬಿಸಿ ತಟ್ಟಲಿದೆ ಎನ್ನಲಾಗಿದೆ.

karnataka Police

ವರ್ಗಾವಣೆಗೆ ಸಿದ್ದತೆ

ಕಳೆದ ಐದು ವರ್ಷಗಳಲ್ಲಿ ಇಲಾಖೆಯೊಳಗಿನ ಆಗು ಹೋಗುಗಳನ್ನ ಗಮನಿಸಿರುವ ಕಾಂಗ್ರೆಸ್ ಆಯಾ ಭಾಗಗಳ ಶಾಸಕರು, ಸಚಿವರ ಕೃಪಾ ಕಟಾಕ್ಷದಿಂದ ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರದಲ್ಲಿರುವ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಿದೆ.

ಅಷ್ಟೇ ಅಲ್ಲದೇ ನಗರ ಪೊಲೀಸ್ ಆಯುಕ್ತ, ಹೆಚ್ಚುವರಿ ಪೊಲೀಸ್ ಆಯುಕ್ತ, ಜಂಟಿ ಪೊಲೀಸ್ ಆಯುಕ್ತರ ವರ್ಗಾವಣೆಗೂ ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

ನಗರ ಪೊಲೀಸ್ ಆಯುಕ್ತರ ವರ್ಗಾವಣೆ?

ಸದ್ಯ ನಗರ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಾಪ್ ರೆಡ್ಡಿ ಅವರ ವರ್ಗಾವಣೆಯೂ ಆಗಲಿದೆ ಎಂಬ ಮಾತು ಇಲಾಖೆಯ ವಲಯದಲ್ಲೇ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ನೂತನ ಪೊಲೀಸ್ ಆಯುಕ್ತರ ಸ್ಥಾನಕ್ಕೆ ಈಗಾಗಲೇ ಸದ್ದಿಲ್ಲದೆ ಪೈಪೋಟಿ ಆರಂಭವಾಗಿದೆ.

ಈ ಮುನ್ನ ಪ್ರತಾಪ್ ರೆಡ್ಡಿ ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗುವ ಮುನ್ನವೇ ಹಿರಿತನದ ಆಧಾರದಲ್ಲಿ ಬಿ.ದಯಾನಂದ್ ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗುವ ಮಾತು ಕೇಳಿ ಬಂದಿತ್ತು. ಆದರೆ, ಪ್ರತಾಪ್ ರೆಡ್ಡಿ ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದರು.

ಆದ್ದರಿಂದ ಈ ಬಾರಿ ಮತ್ತೊಮ್ಮೆ ದಯಾನಂದ್ ಹೆಸರು ಕೇಳಿ ಬರುತ್ತಿದೆ. ಅಲ್ಲದೇ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ಸಹ ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಜತೆಗೆ ಮತ್ತೋರ್ವ ಹಿರಿಯ ಅಧಿಕಾರಿ ಪಿ.ಹರಿಶೇಖರನ್ ಸಹ ಕಮೀಷನರ್ ರೇಸ್‌ನಲ್ಲಿದ್ದಾರೆ.

ಸರ್ಕಾರ ರಚನೆಯಾದ ಬಳಿಕ ಮೊದಲ ಕೆಲಸವೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಯಲಿದೆ. ಇದೇ ತಿಂಗಳ ಅಂತ್ಯದೊಳಗೆ ಪೊಲೀಸ್ ಇಲಾಖೆಯೊಳಗಿನ ಹಿರಿಯ-ಕಿರಿಯ ಅಧಿಕಾರಿಗಳ ಸ್ಥಾನಗಳು ಪಲ್ಲಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net