

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ನಿಡ್ಡೋಡಿ, ಕಲ್ಲಮುಂಡ್ಕೂರು ಗ್ರಾಮಗಳಲ್ಲಿ ರಾಜಾರೋಷವಾಗಿ ಗಣಿಗಾರಿಕೆ ನಡೆಯುತ್ತಿದೆ. ಗಣಿ ಇಲಾಖೆಯವರಲ್ಲಿ ಪ್ರಶ್ನಿಸಿದರೆ ತಹಸೀಲ್ದಾರ್ ಎನ್‌ಒಸಿ ನೀಡಿದ್ದಾರೆ ಎಂದು ಹೇಳುತ್ತಾರೆ. ಅಕ್ರಮವಾಗಿ ನಡೆಯುವ ಗಣಿಗಾರಿಕೆಗೆ ಹೇಗೆ ಪರವಾನಗಿ ನೀಡಿದ್ದೀರಿ?ಎಂದು ಕೇಳಲು, ಅದರಿಂದಾಗುತ್ತಿರುವ ಸಮಸ್ಯೆ ತಿಳಿಸಲು ತಹಸೀಲ್ದಾರರು ಗ್ರಾಮಸಭೆಗೆ ಬರಬೇಕು ಎಂದು ಕಲ್ಲಮುಂಡ್ಕೂರು ಗ್ರಾಮಸ್ಥರು ಪಟ್ಟು ಹಿಡಿದರು.
ಕಲ್ಲಮುಂಡ್ಕೂರು ಗ್ರಾಪಂ ಕಾರ್ಯಾಲಯದ ಸಭಾಭವನದಲ್ಲಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಲಾದ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಗಣಿಗಾರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಸುಂದರ್, ಗ್ರಾಮಸ್ಥ ಸುಧಾಕರ್ ಸಹಿತ ಗ್ರಾಮಸ್ಥರು, ಗಣಿಗಾರಿಕೆಗೆ ಅವಕಾಶ ನೀಡಿರುವುದರ ವಿರುದ್ಧ ಉತ್ತರಿಸಲು ತಹಸೀಲ್ದಾರ್ ಬರಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಮೊದಲೇ ಪಂಚಾಯಿತಿಗೆ ಗ್ರಾಮಸ್ಥರು ಮನವಿ ಮಾಡಿದ್ದೇವೆ. ಇಲ್ಲವಾದಲ್ಲಿ ಗ್ರಾಮಸಭೆ ಮುಂದುವರಿಸುವುದು ಬೇಡ ಎಂದು ಪಟ್ಟು ಹಿಡಿದರು.
ಕಂದಾಯ ನಿರೀಕ್ಷಕ ಮಂಜುನಾಥ ಸಭೆಗೆ ಬಂದು ಗಣಿ ಇಲಾಖೆಯವರು ಖಾಸಗಿ ಜಾಗವೇ, ಇಲ್ಲ ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆಯೇ ಎನ್ನುವ ಮಾಹಿತಿ ಕೇಳಿದ್ದಾರೆ. ಗಣಿಗಾರಿಕೆಯವರ ಸೂಚನೆಯಂತೆ ಎನ್‌ಒಸಿ ನೀಡಲಾಗಿದೆ. ಗಣಿಗಾರಿಕೆ ನಡೆಸುತ್ತಿರುವ ಜಾಗದಲ್ಲಿ ಹೈಟೆನ್ಶನ್ ವಿದ್ಯುತ್ ವಯರ್ ಹಾದುಹೋಗಿದ್ದು, ಸಂಬಂಧಪಟ್ಟ ಇಲಾಖೆ ಕ್ರಮ ತೆಗೆದುಕೊಂಡರೆ ಗಣಿಗಾರಿಕೆ ಸ್ಥಗಿತವಾಗಬಹುದು. ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ತಹಸೀಲ್ದಾರ್‌ಗೆ ಮನವರಿಕೆ ಮಾಡಲಾಗುವುದು ಎಂದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಪ್ರವೀಣ್ ನೋಡೆಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ವಿದ್ಯಾಲತಾ, ಪಿಡಿಒ ಪ್ರಶಾಂತ್ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು.
ಅಪಾಯಕಾರಿ ಮರ ತೆರವುಗೊಳಿಸಿ
ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಗ್ರಾಮಸಭೆಯಲ್ಲಿ ನಿರ್ಣಯವಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಪಂಚಾಯಿತಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ರಾಘವೇಂದ್ರ ಶೆಟ್ಟಿ ಭರವಸೆಯಿತ್ತರು.
ಸ್ಮಶಾನಕ್ಕೆ ಹೆಚ್ಚಿನ ಜಾಗ
ಸ್ಮಶಾನಕ್ಕೆ ಜಾಗ ಕಾಯ್ದಿರಿಸುವ ಕುರಿತು ಸದಸ್ಯ, ಮಾಜಿ ಅಧ್ಯಕ್ಷ ಕೇಶವ ಸಭೆಯಲ್ಲಿ ಪ್ರಸ್ತಾಪಿಸಿದರು. ಸ್ಮಶಾನಕ್ಕೆ 7 ಸೆಂಟ್ಸ್ ಜಾಗವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿದೆ. ಹೆಚ್ಚುವರಿ ಜಾಗ ನೀಡುವಂತೆ ಗ್ರಾಪಂ ಬೇಡಿಕೆ ಇರುವುದರಿಂದ ಅದು ಪೆಂಡಿಂಗ್ ಇದೆ ಎಂದು ಕಲ್ಲಮುಂಡ್ಕೂರು ವಿಎ ದೀಪಿಕಾ ತಿಳಿಸಿದರು. ನಿಡ್ಡೋಡಿ ಗ್ರಾಮದಲ್ಲಿ ವಿಎ ಕಚೇರಿ ನಿರ್ಮಾಣಕ್ಕೆ ಮಂಜೂರಾದ ಜಾಗ ಅತಿಕ್ರಮಣವಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಸುಂದರ್ ಪ್ರಶ್ನಿಸಿದರು. ಜಾಗ ಅತಿಕ್ರಮಣದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ವಿಎ ಅನಿಲ್ ಕುಮಾರ್ ತಿಳಿಸಿದರು.
ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚಾಗುತ್ತಿವೆ. ಕಲ್ಲಮುಂಡ್ಕೂರು ಸಮೀಪದ ಸಂಪಿಗೆಯಲ್ಲಿ ಉದ್ಯೋಗ ನೀಡುವ ಭರವಸೆಯ ಕರೆಗೆ ಸ್ಪಂದಿಸಿದವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಉಪನ್ಯಾಸಕರು ಕೂಡ ವಂಚನೆಗೊಳಗಾಗಿದ್ದಾರೆ. ಗ್ರಾಮಸ್ಥರು ಈ ಕುರಿತು ಜಾಗೃತರಾಗಬೇಕು. ಅಲ್ಲಲ್ಲಿ ನಡೆಯುವ ಲಕ್ಕಿ ಸ್ಕೀಂಗಳ ಬಗ್ಗೆ ಜಾಗೃತರಾಗುವುದು ಉತ್ತಮ. ರಾಜೇಶ್ ಮೂಡುಬಿದಿರೆ, ಪೊಲೀಸ್ ಠಾಣೆ ಎಎಸ್‌ಐ