

ಬಂಟ್ವಾಳ: ಬಂಟ್ವಾಳ ತಾಲೂಕಿನ ಮೊಗರ್ನಾಡು ಸೀಮೆಯ ಸರ್ಕಾರಿ ಶಾಲೆಗಳಿಗೆ ಕಲ್ಲಡ್ಕ ನಿಟಿಲೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾರುದ್ರ ಯಾಗದಲ್ಲಿ ಉಳಿಕೆಯ ಶೇ.50 ಭಾಗವನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗುವುದು ಎಂದು ಧಾರ್ಮಿಕ ಮುಖಂಡ ಜಗನ್ನಾಥ್ ಚೌಟ ಬದಿಗುಡ್ಡೆ ಹೇಳಿದರು.
ಬುಧವಾರ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಶಾಲೆ ನನ್ನ ಕೊಡುಗೆ ವಿಶೇಷ ಕಾರ್ಯಕ್ರಮದಲ್ಲಿ, ಶಾಲಾ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಹಳೇ ವಿದ್ಯಾರ್ಥಿ ಎ.ರುಕ್ಮಯ ಪೂಜಾರಿ ಶಾಲಾ ನೂತನ ಲಾಂಛನ ಬಿಡುಗಡೆಗೊಳಿಸಿದರು. ಅಭಿವೃದ್ಧಿ ಚಟುವಟಿಕೆಗಳಿಗೆ ಸಹಕಾರ ಕೋರುವ ವಿಡಿಯೋವನ್ನು ತಾಪಂ ಮಾಜಿ ಅಧ್ಯಕ್ಷ ಪದ್ಮನಾಭ ರೈ ಬಿಡುಗಡೆಗೊಳಿಸಿದರು. ದೇಣಿಗೆ ಕೂಪನ್ ಬಿಡುಗಡೆಗೊಳಿಸಲಾಯಿತು.
ಶಾಲಾ ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷ ನಾಗೇಶ್ ಕೆ., ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತಿನ್ ಕುಮಾರ್ ಏಳ್ತಿಮಾರ್, ರತ್ನಾಕರ ಶೆಟ್ಟಿ ಕಲ್ಲಡ್ಕ, ಪಂಚಾಯಿತಿ ಸದಸ್ಯೆ ಲಿಖಿತಾ ಆರ್.ಶೆಟ್ಟಿ, ಯೂಸುಫ್ ಹೈದರ್, ರಮೇಶ್ ನಾಯಕ್, ಸುಂದರ್, ಮೋಹನದಾಸ್ ಕೊಟ್ಟಾರಿ, ರವಳನಾಥ್ ಮೆಲ್ಕಾರ್ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಧುಸೂದನ್ ಐತಾಳ್ ಸ್ವಾಗತಿಸಿದರು. ಮುಖ್ಯಶಿಕ್ಷಕ ಅಬೂಬಕರ್ ಅಶ್ರಫ್ ಪ್ರಾಸ್ತಾವಿಕ ಮಾತನಾಡಿದರು. ಹಮೀದ್ ಅಲಿ ವಿಜ್ಞಾಪನಾ ಪತ್ರ ವಾಚಿಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯೆ ಪುಷ್ಪಾವತಿ ವಂದಿಸಿದರು. ಶಿಕ್ಷಕಿ ಸೌಮ್ಯಲತಾ ರಾವ್ ನಿರೂಪಿಸಿದರು.