ಲ್ಯಾಪ್‌ಟಾಪ್‌ನಲ್ಲಿ ದೋಷ ದಂಡ ಪಾವತಿಗೆ ಕೋರ್ಟ್ ಸೂಚನೆ

New Project
Published on

ಉಳ್ಳಾಲ: ವೈದ್ಯರೊಬ್ಬರು ಖರೀದಿಸಿದ ಹೊಸ ಲ್ಯಾಪ್‌ಟಾಪ್‌ನಲ್ಲಿ ಕಂಡು ಬಂದ ಸಮಸ್ಯೆ ನಿವಾರಿಸಲು ಕಂಪನಿ ವಿಲವಾದ ಹಿನ್ನೆಲೆ ಉತ್ಪನ್ನದ ಖರೀದಿ ಮೊತ್ತವನ್ನು ಶೇ.6ರ ಬಡ್ಡಿದರ ಸಹಿತ 45 ದಿನಗಳೊಳಗೆ ಹಿಂತಿರುಗಿಸುವಂತೆ ಹಾಗೂ ತಪ್ಪಿದಲ್ಲಿ ಕಂಪನಿ ಮೇಲೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.

ಮುಡಿಪುವಿನ ಡಾ.ಅರುಣ್ ಪ್ರಸಾದ್ ಅವರು ಏಸುಸ್ ಕಂಪನಿಯ 1,09,990 ರೂ. ಮೌಲ್ಯದ ಲ್ಯಾಪ್‌ಟಾಪ್ ಖರೀದಿಸಿದ್ದರು. ಇದಕ್ಕೆ ಒಂದು ವರ್ಷದ ವಾರಂಟಿ ಜತೆಗೆ 3498 ರೂ. ಮೌಲ್ಯದ ಎಕ್ಸ್‌ಟೆಂಡೆಡ್ ವಾರಂಟಿ ಪಡೆದಿದ್ದರು. ಖರೀದಿಸಿದ 6 ತಿಂಗಳಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಗ್ಗೆ ಕಂಪನಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ರಿಪೇರಿ, ಖರೀದಿಸಿದ ಮೌಲ್ಯ ಹಿಂತಿರುಗಿಸಲು ಮುಂದಾಗಲಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋದರು.

ದೂರುದಾರರು ಮತ್ತು ಪ್ರತಿವಾದಿಗಳ ಸಾಕ್ಷಿ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಲ್ಯಾಪ್‌ಟಾಪ್‌ನಲ್ಲಿ ತಯಾರಿಕಾ ದೋಷ ಇದೆ ಎಂಬ ದೂರುದಾರರ ವಾದ ಎತ್ತಿ ಹಿಡಿದು, ಲ್ಯಾಪ್‌ಟಾಪ್ ಖರೀದಿಸಿದ ಮೌಲ್ಯ 1,09,990 ರೂ. ಮತ್ತು ಶೇ.6ರ ಬಡ್ಡಿ ದರ ಸಹಿತ 45 ದಿನಗಳೊಳಗಾಗಿ ಹಿಂತಿರುಗಿಸುವಂತೆ ಆದೇಶ ನೀಡಿದೆ. ಪ್ರತಿವಾದಿಗಳು ದೂರುದಾರರಿಗೆ ಸೇವಾ ನ್ಯೂನತೆ, ವಾನಸಿಕ ತೊಂದರೆಗಾಗಿ 30 ಸಾವಿರ ರೂ. ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 10 ಸಾವಿರ ರೂ. ನೀಡಲು ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net